ಸೋಮವಾರಪೇಟೆ,ಮೇ.೨೩: ಮಳೆಗಾಲದಲ್ಲಿ ಹತ್ತಾರು ದಿನಗಳ ಕಾಲ ವಿದ್ಯುತ್ ಇಲ್ಲದೇ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರ ದಶಕಗಳ ಬೇಡಿಕೆ ಕೊನೆಗೂ ಈಡೇರಿದ್ದು, ವಿದ್ಯುತ್ ಮಾರ್ಗ ಬದಲಾವಣೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸೋಮವಾರಪೇಟೆಯಿಂದ ಕಲ್ಕಂದೂರು ಮಾರ್ಗವಾಗಿ ಕಂಬಳ್ಳಿಯ ಮೂಲಕ ಈವರೆಗೆ ವಿದ್ಯುತ್ ಸರಬರಾಜು ಆಗುತ್ತಿತ್ತು. ಈ ಮಾರ್ಗದಲ್ಲಿ ದಟ್ಟ ಕಾಡು, ಕಾಫಿ ತೋಟ ಇರುವುದರಿಂದ ಮಳೆಗಾಲದಲ್ಲಿ ಸಣ್ಣ ಪುಟ್ಟ ಕೊಂಬೆಗಳು ಮುರಿದು ಬಿದ್ದು ವಿದ್ಯುತ್ ಸ್ಥಗಿತಗೊಂಡರೂ ಮರು ಸಂಪರ್ಕ ಪಡೆಯಲು ಕಷ್ಟಸಾಧ್ಯವಾಗಿತ್ತು.
ಕಾಡಿನೊಳಗೆ ಉಂಟಾಗುವ ಇಂತಹ ಅವಘಡಗಳನ್ನು ಕಂಡು ಹಿಡಿಯಲು ಇಲಾಖೆಗೂ ಕಷ್ಟಕರವಾಗಿತ್ತು. ಪರಿಣಾಮ ಮಳೆಗಾಲದಲ್ಲಿ ಕನಿಷ್ಟ ೩೦ ರಿಂದ ೪೦ ದಿನಗಳ ಕಾಲ ತೋಳೂರು ಶೆಟ್ಟಳ್ಳಿ, ಕೂತಿ, ದೊಡ್ಡತೋಳೂರು, ಎಡದಂತೆ, ಸಿಂಗನಳ್ಳಿ, ಹಂಚಿನಳ್ಳಿ ಸೇರಿದಂತೆ ಸುತ್ತಮುತ್ತಲ ಸಾವಿರಾರು ಕುಟುಂಬಗಳು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿತ್ತು. ಮೊಬೈಲ್ ಬ್ಯಾಟರಿ ಚಾರ್ಜ್ ಮಾಡಲೂ ಸಹ ಪಟ್ಟಣಕ್ಕೆ ಆಗಮಿಸಬೇಕಿತ್ತು.
ಇದರಿಂದ ಬೇಸತ್ತ ಗ್ರಾಮಸ್ಥರು ಹೊಸಬೀಡು ಗ್ರಾಮದ ಮೂಲಕ ರಾಜ್ಯ ಹೆದ್ದಾರಿಯ ಬದಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್, ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ನೀಡುವಂತೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳೂ ಸೇರಿದಂತೆ ಸಂಸದರು, ಪ್ರಧಾನಿಗಳಿಗೂ ಮನವಿ ಸಲ್ಲಿಸಿದ್ದರು. ಪ್ರಧಾನಿಗಳಿಗೆ ಪತ್ರ ಚಳುವಳಿ ಮಾಡಿ ಸಾವಿರಾರು ಕಾರ್ಡ್ಗಳನ್ನು ಕಳುಹಿಸಿದ್ದರು.
ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಗ್ರಾಮಸ್ಥರು ಶಾಸಕರೊಂದಿಗೆ ಸಮಾಲೋಚಿಸಿ ಒತ್ತಡ ಹಾಕಿದ್ದರು. ನಂತರ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಸಭೆ ನಡೆಸಿ, ಸೆಸ್ಕ್ ಅಧಿಕಾರಿಗಳೊಂದಿಗೆ ವ್ಯವಹರಿಸಿ ಕೊನೆಗೂ ವಿದ್ಯುತ್ ಮಾರ್ಗ ಬದಲಾವಣೆಯಲ್ಲಿ ಯಶ ಕಂಡಿದ್ದಾರೆ.
ಗ್ರಾಮ ಪಂಚಾಯಿತಿ, ಗ್ರಾಮಸ್ಥರು ಒಂದಿಷ್ಟು ಹಣವನ್ನು ಸಂಗ್ರಹಿಸಿ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ ಅಳವಡಿಕೆಗೆ ಕ್ರಮ ವಹಿಸಿದ್ದು, ರಸ್ತೆ ಬದಿಯಲ್ಲಿದ್ದ ಮರಗಳನ್ನು ಶ್ರಮದಾನದ ಮೂಲಕ ತೆರವುಗೊಳಿಸಿ ತಮ್ಮ ಗ್ರಾಮಕ್ಕೆ ತಾವೇ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದ್ದಾರೆ.
ಇದರಿಂದಾಗಿ ಇಷ್ಟು ವರ್ಷಗಳ ಕಾಲ ಮಳೆಗಾಲದಲ್ಲಿ ಎದುರಿಸುತ್ತಿದ್ದ ವಿದ್ಯುತ್ ಸಮಸ್ಯೆಯಿಂದ ಮುಕ್ತಿ ಪಡೆದಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ನೂತನ ಮಾರ್ಗಕ್ಕೆ ಚಾಲನೆ ನೀಡುವ ಮೂಲಕ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಸಿದ್ದಾರೆ.
ಈ ಸಂದರ್ಭ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಮಾಜಿ ಸದಸ್ಯ ಧರ್ಮಪ್ಪ, ಮಾಜಿ ಅಧ್ಯಕ್ಷ ಮುತ್ತಣ್ಣ ಸೇರಿದಂತೆ ಗ್ರಾಮಸ್ಥರು, ಪ್ರಮುಖರು ಇದ್ದರು.