ಮಡಿಕೇರಿ, ಮೇ ೨೩: ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿರುವ ಇಗ್ಗುತಪ್ಪ ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳು ಆನೆ ಕಾಟದಿಂದ ತತ್ತರಿಸಿದ್ದಾರೆ. ದೇವಸ್ಥಾನದಿಂದ ಕೂಗಳತೆ ದೂರದಲ್ಲಿರುವ ಬೊಳ್ಳನಮಂಡ ದೇಚಮ್ಮ ಅವರ ನಿವಾಸದ ಅಂಗಳಕ್ಕೇ ಬಂದಿರುವ ಕಾಡಾನೆ ಹಿಂಡು ತೆಂಗಿನ ಗಿಡಗಳನ್ನು ಉರುಳಿಸಿ ಭಕ್ಷಿಸಿದೆ. ಕಳೆದ ಎಂಟು ವರ್ಷಗಳಿಂದ ಸಾಕಿ ಬೆಳೆಸಿದ್ದ ತೆಂಗಿನ ಸಸಿಗಳು ಕಣ್ಣೆದುರೇ ನಾಶವಾಗಿದ್ದನ್ನು ಕಂಡು ದೇಚಮ್ಮ ಕಣ್ಣೀರಿಡುತ್ತಿದ್ದಾರೆ.
ಎರಡು ವರ್ಷಗಳಿಂದ ಗ್ರಾಮದ ಬೆಟ್ಟ ಪ್ರದೇಶಗಳಲ್ಲಿ ಕಾಡಾನೆಗಳು ಕಾಣಿಸಿಕೊಳ್ಳಲಾರಂಭಿಸಿದ್ದು, ಇದೀಗ ಈ ಗಜಪಡೆ ಸೀದಾ ಮನೆ ಅಂಗಳಕ್ಕೇ ಬಂದು ತಲುಪಿವೆ. ಈ ಗ್ರಾಮದ ಬಹುತೇಕ ಮಕ್ಕಳು ಶಾಲೆ ಕಾಲೇಜಿಗೆ ತೆರಳುತ್ತಾರೆ. ಹಾಗಾಗಿ ಪೋಷಕರು ಇನ್ನಿಲ್ಲದ ಆತಂಕಕ್ಕೆ ಸಿಲುಕಿದ್ದಾರೆ. ಈ ಗ್ರಾಮದ ಕಾಫಿತೋಟಗಳಲ್ಲೇ ಬೀಡು ಬಿಟ್ಟಿರುವ ಕಾಡಾನೆಗಳಿಂದಾಗಿ ತೆಂಗು, ಅಡಿಕೆ, ಬಾಳೆ, ಹಲಸು ಬೆಳೆಗಳು ಕೈಗೇ ಸಿಗದಂತಾಗಿದೆ.
ಆನೆ ಕಾರಿಡಾರ್ ಅತಿಕ್ರಮಣವೆ ಸಮಸ್ಯೆಗೆ ಕಾರಣ ಈ ಗ್ರಾಮಸ್ಥರ ಪ್ರಕಾರ ಕಕ್ಕಬ್ಬೆ, ಯವಕಪಾಡಿ ಗ್ರಾಮ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್ಗಳಿದ್ದವು. ಆದರೆ ಇದೀಗ ಅವುಗಳು ಒತ್ತುವರಿಗೊಂಡಿವೆ. ಇದೂ ಕೂಡ ಆನೆಗಳು ಜನ ವಸತಿಯತ್ತ ಬರಲು ಕಾರಣ. ಪಡಿನಾಲ್ಕು ಮೀಸಲು ಅರಣ್ಯ, ಬ್ರಹ್ಮಗಿರಿ ವನ್ಯಧಾಮ ಮತ್ತು ಕೇರಳದಿಂದಲೂ ಆನೆಗಳು ಈ ಭಾಗದತ್ತ ಬರುತ್ತವೆ ಎನ್ನುತ್ತಾರೆ ಗ್ರಾಮಸ್ಥರು.