ಸಿದ್ದಾಪುರ, ಮೇ ೨೨: ನದಿ ತೀರದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಿಕೊಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ. ಗಣೇಶ್, ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ನೆಲ್ಲಿಹುದಿಕೇರಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮಾತನಾಡಿದ ಅವರು, ೨೦೧೮-೨೦೧೯ರಲ್ಲಿ ನೆಲ್ಲಿಹುದಿಕೇರಿ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ತೀರದ ನೂರಾರು ಮನೆಗಳು ಪ್ರವಾಹಕ್ಕೆ ಸಿಲುಕಿ ನೆಲಸಮಗೊಂಡಿವೆ. ಆದರೆ, ಸರ್ಕಾರವು ಈವರೆಗೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡದೇ ನಿರ್ಲಕ್ಷö್ಯ ವಹಿಸಿದೆ ಎಂದು ಆರೋಪಿಸಿದ ಅವರು, ಅರೆಕಾಡು ಬಳಿ ಒತ್ತುವರಿ ಜಾಗವನ್ನು ಸ್ವಾಧೀನಪಡಿಸಿಕೊಂಡ ಜಿಲ್ಲಾಡಳಿತ ಸಂತ್ರಸ್ತರಿಗೆ ಸೂರು ಕಲ್ಪಿಸಲು ತಡವಾಗಲು ಕಾರಣ ಏನೆಂದು ಪ್ರಶ್ನಿಸಿದರು. ಪುನರ್ವಸತಿಗೆ ಗುರುತಿಸಿರುವ ೮ ಎಕರೆ ಜಾಗವನ್ನು ಸಮತಟ್ಟು ಮಾಡಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಬೇಕೆಂದು ಆಗ್ರಹಿಸಿದರು.
ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಇದೀಗ ಸುರಿದ ಅಕಾಲಿಕ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರು ಏರಿಕೆಯಾಗಿದೆ. ಆತಂಕದಲ್ಲಿ ಜನ ಜೀವನ ಮಾಡುತ್ತಿದ್ದಾರೆ. ಮುಂಗಾರು ಮಳೆ ಆರಂಭವಾಗಲಿದ್ದು, ಕೂಡಲೇ ನದಿ ತೀರದವರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗದ ಜೆ.ಡಿ.ಎಸ್.ನ ಅಧ್ಯಕ್ಷ ಶಿವದಾಸ್, ಯುವ ಜನತಾದಳದ ಪ್ರಮುಖರಾದ ಶೀಯಾಬ್ ತಂಙಳ್, ಸೈಪುದ್ದೀನ್, ಅಬೀಬ್, ಸೈಯದ್ ಇನ್ನಿತರರು ಹಾಜರಿದ್ದರು.
-ವಾಸು