ಸೋಮವಾರಪೇಟೆ, ಮೇ ೨೨: ಫೀರ್ ಪಾಶ ಬಂಗಲೆಯನ್ನು ಅನುಭವ ಮಂಟಪವನ್ನಾಗಿ ಪುನರ್ ನಾಮಕರಣಗೊಳಿಸಲು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಒತ್ತಾಯಿಸಿದೆ.
ಈ ಬಗ್ಗೆ ವೇದಿಕೆಯ ರಾಷ್ಟಿçÃಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಹಾಗೂ ಸಂಘಟನಾ ಕಾರ್ಯದರ್ಶಿ ಎಸ್. ಮಹೇಶ್ ಜಂಟಿ ಪತ್ರಿಕಾ ಹೇಳಿಕೆ ನೀಡಿ ಕಲ್ಯಾಣದಲ್ಲಿ ಬಸವಣ್ಣನವರು ನಿರ್ಮಿಸಿದ ಅನುಭವ ಮಂಟಪ ಇಂದು ಫೀರ್ ಪಾಷಾ ಬಂಗ್ಲೆಯಾಗಿರುವುದು ದುರಂತ ಎಂದು ತಿಳಿಸಿದ್ದಾರೆ.
೧೨ನೆ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಕಲ್ಯಾಣ ರಾಜ್ಯದಲ್ಲಿ ವಿಶ್ವದ ಪ್ರಪ್ರಥಮ ಸಂಸತ್ತು (ಅನುಭವ ಮಂಟಪ) ಸ್ಥಾಪನೆ ಮಾಡಿದ್ದು ಕನ್ನಡಿಗರಿಗೆ ಹೆಮ್ಮೆ ಮತ್ತು ಭಾರತದ ಇತಿಹಾಸದಲ್ಲಿ ಮೈಲಿಗಲ್ಲು. ಇಂತಹ ಅನುಭವ ಮಂಟಪ ಮುಸ್ಲಿಂ ರಾಜರ ದಾಳಿಗೆ ತುತ್ತಾಗಿ ಅದನ್ನು ಫೀರ್ ಪಾಶಾ ಬಂಗ್ಲೆ ಎಂದು ಬದಲಾವಣೆ ಮಾಡಲಾಗಿದೆ.
ವಿಶ್ವಕ್ಕೆ ಸಂಸದೀಯ ಆಡಳಿತದ ಬಗ್ಗೆ ಅರಿವು ಮೂಡಿಸಿದ ಒಂದು ಐತಿಹಾಸಿಕ ಕಟ್ಟಡವನ್ನು ಪುನಶ್ಚೇತನಗೊಳಿಸುವುದನ್ನು ಬಿಟ್ಟು ಹೊಸ ಅನುಭವ ಮಂಟಪ ಸ್ಥಾಪನೆ ಮಾಡ ಹೊರಟಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಬಸವ ಕಲ್ಯಾಣದಲ್ಲಿರುವ ಫೀರ್ ಪಾಶ ಬಂಗ್ಲೆಯ ಪರಿಶೀಲನೆ ನಡೆಸಿ ನಮ್ಮ ಇತಿಹಾಸ ಮರುಕಳಿಸಲು ಸಜ್ಜಾಗಬೇಕು. ಬಂಗಲೆಯನ್ನು ತಕ್ಷಣ ಮರಳಿ ಪಡೆದು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರದೀಪ್ ಹಾಗೂ ಮಹೇಶ್ ಒತ್ತಾಯಿಸಿದ್ದಾರೆ.