(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಮೇ ೨೧ : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ನಲ್ಲಿ ಫೋಟೋ ತೆಗೆಯುವ ಗೀಳು ಹೆಚ್ಚಾಗಿವೆ. ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಮಾಮೂಲಿಯಾಗಿದೆ. ತಿತಿಮತಿ ಸಮೀಪದ ಆನೆ ಚೌಕೂರು ಬಳಿ ಇರುವ ಮತ್ತಿಗೋಡು ಸಾಕಾನೆ ಶಿಬಿರವು ಮೈಸೂರು - ಗೋಣಿಕೊಪ್ಪ ಮುಖ್ಯ ರಸ್ತೆಯ ಬದಿಯಲ್ಲಿರುವುದರಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವ ನೂರಾರು ವಾಹನಗಳು ರಸ್ತೆ ಬದಿಯಲ್ಲಿ ನಿಲ್ಲಿಸಿ ವಾಹನದಲ್ಲಿ ಸಂಚರಿಸುವ ಪ್ರವಾಸಿಗರು ಸಾಕಾನೆ ಶಿಬಿರದಲ್ಲಿರುವ ಆನೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನ ನಿರಂತರ ನಡೆಯುತ್ತಿದೆ.

ಮೊಬೈಲ್ ಫೋನ್‌ನಲ್ಲಿ ಫೋಟೋ ತೆಗೆದುಕೊಳ್ಳುವ ವೇಳೆ ಆನೆಗಳು ಪ್ರಯಾಣಿಕರನ್ನು ಓಡಿಸಿದ್ದು ಇದೆ. ಈ ವೇಳೆ ಗಾಬರಿಗೊಂಡ ಪ್ರವಾಸಿಗರು ಆತುರದಿಂದ ರಸ್ತೆ ಬದಿಗೆ ಆಗಮಿಸುವ ವೇಳೆ ಅಪಘಾತವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆಯು ನಿರ್ಬಂಧಿತ ಪ್ರದೇಶವೆಂದು ನಾಮಫಲಕ ಅಳವಡಿಸಿದ್ದರೂ ಇದರ ಬಗ್ಗೆ ಪ್ರವಾಸಿಗರು ಗಮನ ಹರಿಸುತ್ತಿಲ್ಲ. ರಸ್ತೆ ಬದಿಯಲ್ಲಿ ಕಂದಕ ನಿರ್ಮಾಣ ಮಾಡಿದ್ದರೂ ಈ ಕಂದಕವನ್ನು ದಾಟುವ ಪ್ರಯತ್ನ ನಿರಂತರ ನಡೆಯುತ್ತಿದೆ.

ಈ ಭಾಗದ ಶಿಬಿರದಲ್ಲಿರುವ ಸಾಕಾನೆಗಳು ಮುಖ್ಯ ರಸ್ತೆಯನ್ನು ದಾಟಿ ಅರಣ್ಯ ಪ್ರದೇಶಕ್ಕೆ ತೆರಳುವುದು ವಾಡಿಕೆಯಾಗಿದೆ. ಈ ವೇಳೆ ಪ್ರವಾಸಿಗರು ಎದುರಾದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಸಾಕಾನೆ ಶಿಬಿರದಲ್ಲಿ ೧೦ಕ್ಕೂ ಅಧಿಕ ಆನೆಗಳನ್ನು ಸಾಕಲಾಗುತ್ತಿದೆ. ಪ್ರತಿನಿತ್ಯ ಇವುಗಳಿಗೆ ಬೇಕಾದ ಆಹಾರವನ್ನು ಸಮೀಪದ ಅರಣ್ಯದಲ್ಲಿ ಲಭ್ಯವಾಗುತ್ತಿವೆ. ಹೊರ ಜಿಲ್ಲೆ ಹಾಗೂ ರಾಜ್ಯದಿಂದ ಆಗಮಿಸುವ ಪ್ರವಾಸಿಗರಿಗೆ ಸಾಕಾನೆಗಳ ಶಿಬಿರದ ಕಟ್ಟು ಪಾಡುಗಳು ತಿಳಿದಂತಿಲ್ಲ. ಪ್ರಯಾಣಿಕರು ಹಾಗೂ ಪ್ರವಾಸಿಗರು ತಮ್ಮ ಪುಟ್ಟ ಮಕ್ಕಳೊಂದಿಗೆ ಶಿಬಿರದಲ್ಲಿರುವ ಆನೆಯನ್ನು ಫೋಟೋ ತೆಗೆಯುವ ಪ್ರಯತ್ನದಲ್ಲಿ ಮಗ್ನರಾಗಿದ್ದ ವೇಳೆ ಇನ್ನೊಂದು ಬದಿಯಿಂದ ಆನೆಗಳು ಬರುವ ಸಾಧ್ಯತೆಗಳು ಹೆಚ್ಚಾಗಿವೆ.

ರಸ್ತೆಯಲ್ಲಿ ಮಂಗಗಳು : ಆನೆ ಚೌಕೂರು ಬಳಿ ಹಾಗೂ ಪಿರಿಯಾಪಟ್ಟಣ ರಸ್ತೆಯ ಬದಿಯಲ್ಲಿ ನೂರಾರು ಮಂಗಗಳು ರಸ್ತೆಯಲ್ಲಿಯೆ ಕುಳಿತುಕೊಂಡಿರುವುದರಿAದ ಅನೇಕ ಅಪಘಾತಗಳು ಸಂಭವಿಸಿವೆ. ಈ ವೇಳೆ ಮಂಗಗಳು ಸಾವನ್ನಪ್ಪಿವೆ. ಮಂಗಗಳಿಗೆ ಆಹಾರ ನೀಡುವ ಸಲುವಾಗಿ ಪ್ರವಾಸಿಗರು ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಬಾಳೆ ಹಣ್ಣು ಸೇರಿದಂತೆ ಇತರ ಹಣ್ಣು ಹಂಪಲುಗಳನ್ನು ಮಂಗಗಳಿಗೆ ನಿರಂತರ ನೀಡುತ್ತಿದ್ದಾರೆ. ಇದರಿಂದ ಅರಣ್ಯದಲ್ಲಿರುವ ಮಂಗಗಳು ರಸ್ತೆಯ ಬದಿ ಬಂದು ಸಾಲು ಸಾಲಾಗಿ ಅಡ್ಡಾಡುತ್ತಿರುತ್ತವೆ. ಸಾರ್ವಜನಿಕರು ನೀಡುವ ಆಹಾರಕ್ಕಾಗಿ ಎದುರು ನೋಡುತ್ತಿರುತ್ತವೆ. ಈ ವೇಳೆ ರಸ್ತೆ ಮಧ್ಯದಲ್ಲಿಯೆ ಮಂಗಗಳು ಕುಳಿತುಕೊಳ್ಳುತ್ತಿರುವುದರಿಂದ ವಾಹನ ಸಂಚಾರರಿಗೆ ಅಡಚಣೆ ಉಂಟಾಗುತ್ತಿದೆ. ದಾರಿ ಹೋಕರು ಹಾಗೂ ಪ್ರವಾಸಿಗರು ತಮ್ಮ ವಾಹನದಿಂದ ಹಣ್ಣು ಹಂಪಲುಗಳನ್ನು ನೀಡುತ್ತಿರುವುದರಿಂದ ಹೆಚ್ಚಾಗಿ ರಸ್ತೆಯಲ್ಲಿಯೇ ಮಂಗಗಳು ಸಮಯ ಕಳೆಯುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.