ಮಡಿಕೇರಿ, ಮೇ ೨೦: ಕೊಡಗಿನ ಜನರು ಮೂಲತ ಶಾಂತಿ ಪ್ರಿಯರು. ಇಲ್ಲಿ ಆಶಾಂತಿ ಮೂಡಿಸುವ ಪ್ರಯತ್ನಕ್ಕೆ ಕೆಲವರು ಕೈಹಾಕಿದ್ದು ರಾಜಕೀಯ ಲಾಭಕ್ಕಾಗಿ ಬಿಜೆಪಿ ಮುಖಂಡರು ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ ಆರೋಪಿಸಿದ್ದಾರೆ.
ಇತ್ತೀಚೆಗೆ ಕೊಡಗಿನ ಪೊನ್ನಂಪೇಟೆಯ ಶಾಲಾ ಆವರಣದಲ್ಲಿ ಬಂದೂಕು ತರಬೇತಿ ಹಾಗೂ ತ್ರಿಶೂಲ ದೀಕ್ಷೆ ಎಂದು ಕಾರ್ಯಕ್ರಮ ನಡೆಸಿ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿರುವುದು ಖಂಡನೀಯ. ಯುವ ಸಮುದಾಯಕ್ಕೆ ಉನ್ನತ ವಿದ್ಯಾಭ್ಯಾಸ ಹಾಗೂ ಭವಿಷ್ಯದ ದೃಷ್ಟಿಯಿಂದ ಉದ್ಯೋಗ ಪಡೆಯಲು ಪೂರಕವಾದ ತರಬೇತಿ ನೀಡುವ ಬದಲು ದ್ವೇಷ ಉಲ್ಬಣಿಸಿ ಹೊಡೆದಾಟ ಮಾಡಲು ತರಬೇತಿ ನೀಡಿ ಅವರನ್ನು ಎಳೆಯ ಮನಸ್ಸುಗಳ ಮೇಲೆ ಪ್ರಹಾರ ನಡೆಸಿದ್ದಾರೆ.
ಕೊಡಗು ಹೆಚ್ಚಿನ ಅರಣ್ಯ ಪ್ರದೇಶವನ್ನು ಹೊಂದಿದ್ದು, ಇಲ್ಲಿ ಭೂ ಮಾಲೀಕರ ಪ್ರತಿ ಮನೆಯಲ್ಲಿ ಬಂದೂಕು ಇರುವುದರಿಂದ ನಕ್ಷಲರು ಇಲ್ಲಿ ಪ್ರವೇಶಿಸುವ ಸಾಹಸ ಮಾಡಲಿಲ್ಲ. ಒಂದೊಮ್ಮೆ ಕುತಂತ್ರಿಗಳ ತಂತ್ರಗಾರಿಕೆಯಿAದ ಸರ್ಕಾರಕ್ಕೆ ಬಂದೂಕು ದುರುಪಯೋಗದ ಬಗ್ಗೆ ಸ್ಪಷ್ಟ ಮಾಹಿತಿ ಹೋಗಿ ಬಂದೂಕು ವಿನಾಯಿತಿ ರದ್ದಾದರೆ ಕೊಡಗಿನ ವ್ಯವಸ್ಥೆ ಊಹಿಸಲೂ ಅಸಾಧ್ಯವಾಗಿದೆ. ಕೊಡಗಿನ ಗ್ರಾಮೀಣ ಭಾಗದಲ್ಲಿ ಒಂಟಿ ಮನೆಗಳೇ ಹೆಚ್ಚು ಇರುವುದು.ಅವರಿಗೆ ರಕ್ಷಣೆ ಹೇಗೆ. ಈ ನಿಟ್ಟಿನಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಕಾರ್ಯಕ್ರಮ ಆತಂಕಕಾರಿಯಾಗಿದೆ. ಶಾಲೆ ಎಂಬ ವಿದ್ಯಾ ದೇಗುಲವನ್ನು ಹಿಂಸೆಯನ್ನು ಪ್ರಚೋದಿಸುವ ಕಾರ್ಯಕ್ಕೆ ಬಳಸಿದ್ದು ಅಕ್ಷಮ್ಯ. ಇದಕ್ಕೆ ಬಿಜೆಪಿ ಜನಪ್ರತಿನಿಧಿಗಳು ಬೆಂಬಲ ನೀಡಿದ್ದು ಶೋಚನೀಯವಾಗಿದೆ ಎಂದು ತೆನ್ನಿರಾ ಮೈನಾ ಹೇಳಿದ್ದಾರೆ.