ಮಡಿಕೇರಿ, ಮೇ ೨೧: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಂಟಿಕೊಪ್ಪ ಸಮೀಪದ ಮಾದಾಪುರ ದಲ್ಲಿ ನಡೆದಿದೆ. ವೈದ್ಯಕೀಯ ವಿದ್ಯಾರ್ಥಿ, ಮಾದಾಪುರದ ಎಂ.ಡಿ. ಹರ್ಷ (೨೦) ಮೃತ ಪಟ್ಟವನು.
ತಾ. ೧೭ ರಂದು ಬೆಳಿಗ್ಗೆ ಮನೆಯಿಂದ ಹೊರಟ ಹರ್ಷ ರಾತ್ರಿಯಾದರೂ ಮನೆೆಗೆ ಬಾರದಿದ್ದಾಗ ಹೆದರಿದ ಪೋಷಕರು ಬಂಧುಮಿತ್ರರು, ಸ್ನೇಹಿತರ ಮನೆಗಳಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹರ್ಷನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು.
ಬುಧವಾರ ಮಾದಾಪುರ ಪೊಲೀಸ್ ಠಾಣೆಗೆ ತೆರಳಿದ ಪೋಷಕರು ಮಗ ಕಾಣೆಯಾಗಿರುವ ಬಗ್ಗೆ ದೂರು ನೀಡಿದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದರು.
ಗುರುವಾರ ಸಂಜೆ ೭ ಗಂಟೆಯ ಸಮಯದಲ್ಲಿ ಮನೆಯ ಅನತಿ ದೂರದಲ್ಲಿರುವ ತೋಟದಲ್ಲಿ ದುರ್ವಾಸನೆ ಬರುತ್ತಿದ್ದುದ್ದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ತೆರಳಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಹರ್ಷನ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಸೋಮವಾರಪೇಟೆ ಪಿಎಸ್ಐ ವಿರೂಪಾಕ್ಷ, ಮಾದಾಪುರ ಎಎಸ್ಐ ಪೊನ್ನಪ್ಪ ಮತ್ತು ಸಿಬ್ಬಂದಿಗಳು ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.