ಮರಗೋಡು, ಮೇ ೨೦: ಮರಗೋಡು ಗ್ರಾಮದ ಜನತಾ ಕಾಲೋನಿಯ ವಾಸುಕಿ ಸನ್ನಿಧಿಯಲ್ಲಿ ಇಂದು ವಾಸುಕಿ ಕಲಶೋತ್ಸವ ಸಮಿತಿ ವತಿಯಿಂದ ವಾರ್ಷಿಕ ಪೂಜಾ ಕಾರ್ಯಗಳು ನಡೆದವು. ಪೂಜೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅರಮೇರಿ ಕಳಂಚೇರಿ ವಿರಕ್ತ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಆಗಮಿಸಿ ಆಶೀರ್ವಚನ ನೀಡಿದರು.

ಮನುಷ್ಯ ತನ್ನ ಜೀವನದಲ್ಲಿ ನೆಮ್ಮದಿಯಿಂದ ಬದುಕಬೇಕಾದರೆ ಭಕ್ತಿಯೊಂದೇ ಸನ್ಮಾರ್ಗವಾಗಿದೆ. ಭಕ್ತಿಯಿಂದ ಮನುಷ್ಯನಲ್ಲಿ ಶಾಂತಿ ನೆಲೆಸುತ್ತದೆ. ಸಂಪತ್ತಿನ ಮೋಹವನ್ನು ತ್ಯಜಿಸಿ ಅಧ್ಯಾತ್ಮದ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಯುವಕರು ಈ ದೇಶದ ಸಂಸ್ಕೃತಿ ಪರಂಪರೆಯನ್ನು ಉಳಿಸುವಂತೆ ತಿಳಿ ಹೇಳಿದರು. ಜಗತ್ತಿನ ದೊಡ್ಡ ಶಕ್ತಿ ಧರೆ ಮತ್ತು ತಾಯಿ. ಧರೆಯು ಇಡೀ ಜಗದ ಜನರ ಹಸಿವನ್ನು ನೀಗಿಸುತ್ತಾಳೆ. ತಾಯಿ ಎಲ್ಲಾ ರೀತಿಯಲ್ಲೂ ಶಕ್ತಿಯಾಗಿ ಪ್ರತಿಯೊಬ್ಬ ಮಗುವಿನ ಸಾಧನೆಯಲ್ಲಿ ಪ್ರಮುಖಳಾಗಿದ್ದಾಳೆ. ಪ್ರತಿ ಮಗುವು ಶಿಕ್ಷಣ ಪಡೆಯುವುದರ ಮೂಲಕ ಜ್ಞಾನವನ್ನು ಸಂಪಾದಿಸಿ ಮಾದರಿಯಾಗಬೇಕು ಎಂದು ಹೇಳಿದರು. ಅರ್ಚಕರುಗಳಾದ ರಾಮಚಂದ್ರ ಮತ್ತು ಗುರುರಾಜ್ ಅವರುಗಳಿಂದ ಬೆಳಿಗ್ಗೆ ಗಣಪತಿಹೋಮ, ಸತ್ಯನಾರಾಯಣ ಪೂಜೆ, ನಾಗತಂಬಿಲ, ಮಹಾಪೂಜೆ ನಂತರ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.