ವೀರಾಜಪೇಟೆ, ಮೇ 19: ವೀರಾಜಪೇಟೆಯಲ್ಲಿ ಇಂದು ಹಿಂದೂ ಜನಜಾಗೃತಿ ಸಮಾವೇಶ ಸುರಿಯುವ ಮಳೆಯ ನಡುವೆ ಅದ್ಧೂರಿಯಾಗಿ ನಡೆಯಿತು. ಒಂದು ವಾರದಿಂದ ಇಡೀ ನಗರಕ್ಕೆ ನಗರವೇ ಕೇಸರಿ ಬಣ್ಣದ ಬಾವುಟಗಳಿಂದ, ತೋರಣಗಳಿಂದ ಅಲಂಕೃತಗೊಂಡಿತ್ತು. ಇಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ತೆಲುಗರ ಬೀದಿಯ ಮಾರಿಯಮ್ಮ ದೇವಸ್ಥಾನ ದಲ್ಲಿ ಶಾಸಕ ಕೆ.ಜಿ ಬೋಪಯ್ಯ ಗೋಪೂಜೆ ಮಾಡುವ ಮೂಲಕ ಶೋಭಾಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ತೆಲುಗರ ಬೀದಿಯಿಂದ ಆರಂಭವಾದ ಶೋಭಾಯಾತ್ರೆ ಹಲವು ವಿಶೇಷತೆಗಳನ್ನು ಒಳಗೊಂಡಿತ್ತು. ಮೆರವಣಿಗೆಯ ಮುಂಭಾಗದಲ್ಲಿ ಸ್ತ್ರೀ ಶಕ್ತಿಯ ದ್ಯೋತಕವಾಗಿ ದುರ್ಗಾ ವಾಹಿನಿ ಹಿಂದೂ ಸಂಘಟನೆಯ ವಿಲ್ಮಾ ಪೂಣಚ್ಚ, ಹಾಗೂ ಗೋಣಿಕೊಪ್ಪದ ವಿಶ್ಮಿತಾ ಮೋಟಾರ್ ಬೈಕ್ ಚಾಲನೆ ಮಾಡುತ್ತಾ ಮುಂದೆ ಸಾಗಿದರೆ, ಭಾರತಮಾತೆ, ಹನುಮಂತನ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಇದ್ದವು. ಸುಮಾರು ಮೂರು ಸಾವಿರಕ್ಕೂ ಅಧಿಕ ಹಿಂದೂ ಕಾರ್ಯಕರ್ತರನ್ನು ಒಳಗೊಂಡ ಶೋಭಾಯಾತ್ರೆ ತೆಲುಗರ ಬೀದಿಯಿಂದ ವಿವಿಧ ಘೋಷಣೆಗಳ ಜೊತೆಗೆ ಆರಂಭವಾಯಿತು.
ಶೋಭಾಯಾತ್ರೆಯ ನಡುವೆ ಡಿ.ಜೆ ಸಂಗೀತ, ಕೇರಳದ ಮಹಿಳೆಯರು ನುಡಿಸುವ ಚಂಡೆ, ವೀರಗಾಸೆ ನೃತ್ಯ ಎಲ್ಲವೂ ಇದ್ದವು. ದಾರಿಮಧ್ಯೆ ತೆಲುಗರ ಬೀದಿಯ ಜನತೆ ಸ್ವಯಂಪ್ರೇರಿತವಾಗಿ ಹಿಂದೂ ಕಾರ್ಯಕರ್ತರಿಗೆ ಹಾಲು ಹಾಗೂ ಬಿಸ್ಕೆಟ್ ನೀಡಿ ಸತ್ಕರಿಸಿದರು. ಬಳಿಕ ಶೋಭಾಯಾತ್ರೆ ಗಡಿಯಾರ ಕಂಬ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣಕ್ಕೆ ಬಂದಾಗ ಖಾಸಗಿ ಬಸ್ ನಿಲ್ದಾಣದವರು ಕಾರ್ಯಕರ್ತರಿಗೆ ಬಾಯಿ ಸಿಹಿ ಮಾಡಲು ಪಾಯಸ ನೀಡಿದರು.
ಶೋಭಾಯಾತ್ರೆಯಲ್ಲಿ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಬಿಜೆಪಿಯ ಹಲವು ಮುಖಂಡರುಗಳು ಸಾಥ್ ನೀಡಿದ್ದು ವಿಶೇಷವಾಗಿತ್ತು. ಅಲ್ಲಿಂದ ಮಾಂಸ ಮಾರುಕಟ್ಟೆ ರಸ್ತೆ ಮಾರ್ಗವಾಗಿ ದೊಡ್ಡಟ್ಟಿ ಚೌಕಿಗೆ ಬಂದ ಮೆರವಣಿಗೆ ಗಡಿಯಾರ ಕಂಬ ಮಾರ್ಗವಾಗಿ ತಾಲೂಕು ಮೈದಾನವನ್ನು ತಲುಪಿತು.
ಶೋಭಾಯಾತ್ರೆಯ ಉದ್ದಕ್ಕೂ ದೇಶಕ್ಕಾಗಿ ಮಿಡಿಯದ ಹೃದಯ, ತಾಯ್ನಾಡಿಗಾಗಿ ಮಿಡಿಯದ ಮನಸುಗಳ ವಿರುದ್ಧ ಘೋಷಣೆ ಕೂಗಲಾಯಿತು. ಚಿಕ್ಕ ಮಕ್ಕಳಿಂದ ಹಿಡಿದು, ಯುವಕರು, ವೃದ್ಧರು, ಮಹಿಳೆಯರು, ಪುರುಷರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಳೆ ಲೆಕ್ಕಕ್ಕಿಲ್ಲ
ಶೋಭಾಯಾತ್ರೆಯ ಆರಂಭದಲ್ಲಿ ಮಳೆರಾಯ ಹಿಂದೂ ಕಾರ್ಯಕರ್ತರ ಉತ್ಸಾಹಕ್ಕೆ ತಣ್ಣೀರು ಎರಚಿದಂತೆ ಕಂಡುಬಂದರೂ ಸಮಯ ಏರುತ್ತಾ ಹೋಗುತ್ತಿದ್ದಂತೆ ಮಳೆ ತಗ್ಗಿತು ಕಾರ್ಯಕರ್ತರ ಸಂಖ್ಯೆ ಏರುತ್ತಲೇ ಹೋಗುತ್ತಿತ್ತು. ಒಂದೊಂದು ಊರಿನಿಂದ ಕಾರ್ಯಕರ್ತರು ಅವರ ವಾಹನಗಳಲ್ಲಿ ಶೋಭಾಯಾತ್ರೆಯ ಬಳಿ ಬಂದಾಗಲೂ ಕಾರ್ಯಕರ್ತರ ಸಂತಸಕ್ಕೆ ಪಾರವೇ ಇರುತ್ತಿರಲಿಲ್ಲ. ಬಂದೋಬಸ್ತ್‍ಗಾಗಿ ಖುದ್ದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ಅವರೇ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಭದ್ರತೆಗಾಗಿ ನಾಲ್ಕು ನೂರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ಮೂವರು ಡಿವೈಎಸ್ಪಿ, ಒಂಬತ್ತು ಮಂದಿ (ಮೊದಲ ಪುಟದಿಂದ) ಇನ್ಸ್‍ಪೆಕ್ಟರ್‍ಗಳು, ಹತ್ತು ಮಂದಿ ಸಬ್‍ಇನ್ಸ್‍ಪೆಕ್ಟರ್‍ಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆಯ್ದ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ನಗರದ ಐದು ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ನಗರದ ಒಳ ಬರುವ ಹಾಗೂ ಹೊರ ಹೋಗುವ ವಾಹನಗಳ ವೀಡಿಯೋ ಚಿತ್ರೀಕರಣ ಕೂಡಾ ಮಾಡಲಾಗುತ್ತಿತ್ತು. ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸಿತು.
ನಗರದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಜನರು ನಿಂತು ಕುತೂಹಲದ ಕಣ್ಣಿನಿಂದ ಶೋಭಾಯಾತ್ರೆಯನ್ನು ವೀಕ್ಷಿಸಿದರು. ಸರಣಿ ಪಟಾಕಿಗಳನ್ನು ಸಿಡಿಸುತ್ತಾ ಬಾಜಭಜಂತ್ರಿಯ ಜೊತೆಗೆ ನಗರದ ತುಂಬೆಲ್ಲಾ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. - ಉಷಾ ಪ್ರೀತಂ