ಸೋಮವಾರಪೇಟೆ,ಮೇ 19: ಕುಶಾಲನಗರದ ಪ್ರತಿಷ್ಠಿತ ಸ್ವೀಟ್ಸ್ ಅಂಗಡಿಯಲ್ಲಿ ಖರೀದಿಸಿದ ಸಿಹಿತಿಂಡಿಯಲ್ಲಿ ಹುಳುಗಳು ಕಂಡುಬಂದಿದ್ದು ಅಂಗಡಿಯ ವಿರುದ್ಧ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಅಧಿಕಾರಿಗಳು ಅಂಗಡಿಗೆ ನೋಟೀಸ್ ಜಾರಿಗೊಳಿಸಿದ್ದಾರೆ.
ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ನಿವಾಸಿ, ಲೇಖಕಿ ಶರ್ಮಿಳಾ ರಮೇಶ್ ಅವರು ನಿನ್ನೆ ರಾತ್ರಿ ಕುಶಾಲನಗರದ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಸ್ವೀಟ್ಸ್ ಅಂಗಡಿಯಿಂದ ಮೈಸೂರುಪಾಕ್ ಹಾಗೂ ಬೇಸಿನ್ ಲಾಡು ಖರೀದಿಸಿದ್ದರು. ಮನೆಗೆ ಬಂದು ಸಿಹಿತಿಂಡಿಯ ಪೆÇಟ್ಟಣ ತೆರೆದು ನೋಡಿದಾಗ ಅದರಲ್ಲಿ ಹುಳುಗಳು ಕಂಡುಬಂದಿವೆ.
ಹೆಸರಾಂತ ಅಂಗಡಿಯಲ್ಲಿ ಬೆಲೆ ಅಧಿಕವಾದರೂ ಗುಣಮಟ್ಟ ಉತ್ಕøಷ್ಟವಾಗಿರುತ್ತದೆ ಎಂದು ಖರೀದಿಸಿದ್ದೇವೆ. ಆದರೆ ಕಳಪೆ ಹಾಗೂ ಹುಳ ಉತ್ಪತ್ತಿಯಾಗಿರುವ ತಿಂಡಿಗಳನ್ನು ಮಾರುತ್ತಿರುವುದು ಸಹಿಸಲು ಸಾಧ್ಯವಿಲ್ಲ. ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ಅಂಗಡಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕಿ ಶರ್ಮಿಳಾ ರಮೇಶ್ ಅವರು ಕುಶಾಲನಗರ ಪಟ್ಟಣ ಪಂಚಾಯಿತಿಗೆ ಒತ್ತಾಯಿಸಿದ್ದಾರೆ.
ಇವರ ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಕ್ರಮ ಕೈಗೊಂಡಿರುವ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಅಂಗಡಿ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ನೋಟೀಸ್ ಜಾರಿ ಮಾಡಿದ್ದು, ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುವವರೆಗೂ ವಹಿವಾಟು ನಡೆಸದಂತೆ ಸೂಚಿಸಿದ್ದಾರೆ.
ಸಂಜೆ ತೆರೆದ ಅಂಗಡಿ
ಮುಂದಿನ ಆದೇಶ ಬರುವವರೆಗೂ ಅಂಗಡಿಯನ್ನು ತೆರೆಯದಂತೆ ನೋಟೀಸ್ ಜಾರಿ ಮಾಡಲಾಗಿದ್ದರೂ, ಸಂಜೆಯಾಗುತ್ತಲೆ ಅಂಗಡಿ ತೆರೆಯಲ್ಪಟ್ಟಿತ್ತು. ಹಾಗಾಗಿದ್ದಲ್ಲಿ ನೋಟೀಸ್ ನೀಡುವ ಉದ್ದೇಶವಾದರೂ ಏನು? ಕೈಗೊಂಡ ಕ್ರಮವಾದರೂ ಏನು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. -ವಿಜಯ್, ಟಿ.ಜಿ. ಸತೀಶ್