ಸೋಮವಾರಪೇಟೆ, ಮೇ 19: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು-ಯಡವಾರೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ನಿರಾತಂಕವಾಗಿದ್ದು, ನಿನ್ನೆ ದಿನ ವಾಸದ ಮನೆಯ ಬಳಿ ಬಂದಿರುವ 2 ಕಾಡಾನೆಗಳು ಆವರಣ ಗೋಡೆಯನ್ನು ಜಖಂಗೊಳಿಸಿ ಹಾನಿ ಮಾಡಿವೆ.

ಯಡವಾರೆ ಗ್ರಾಮದ ಕೆ.ಟಿ. ರವಿ ಅವರ ಮನೆಯ ಬಳಿಗೆ ರಾತ್ರಿ ಬಂದಿರುವ 2 ಕಾಡಾನೆಗಳು, ಮನೆಯ ಪಕ್ಕದಲ್ಲಿ ನಿರ್ಮಿಸಿದ್ದ ಕಾಂಪೌಂಡ್‍ನ್ನು ಕಾಲಿನಿಂದ ಒದ್ದು ನೆಲಕ್ಕುರುಳಿಸಿವೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಅವುಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಾಜೂರಿನ ಗೊತ್ಲಮಂಟಿ ಎಂಬಲ್ಲಿ ಬೀಡುಬಿಟ್ಟಿರುವ 8 ಆನೆಗಳಿರುವ ಹಿಂಡು ಈ ಭಾಗದಲ್ಲಿ ಕೃಷಿ ಪ್ರದೇಶಗಳಿಗೆ ಲಗ್ಗೆಯಿಟ್ಟು ಹಾನಿ ಮಾಡುತ್ತಿವೆ. ಇವುಗಳಿಂದ ಕೃಷಿ ಫಸಲು ನಷ್ಟವಾಗುತ್ತಿದ್ದು, ರಸ್ತೆಯಲ್ಲಿ ಸಂಚರಿಸಲು ಹಾಗೂ ತೋಟಗಳಲ್ಲಿ ಕೆಲಸ ಮಾಡಲೂ ಭಯಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ನಿನ್ನೆ ರಾತ್ರಿ ರವಿ ಅವರ ಮನೆಯ ಕಾಂಪೌಂಡ್ ಹಾನಿ ಮಾಡಿರುವ ಕಾಡಾನೆಗಳು, ಇದೇ ಪರಿಸರದಲ್ಲಿರುವ ಬಾರನ ಸುರೇಶ್, ಕೂಡಕಂಡಿ ಚಂದ್ರಶೇಖರ್, ಲಿಂಗೇರಿ ರಾಜೇಶ್, ಸೋಮಣ್ಣ, ನಾಣಯ್ಯ ಸೇರಿದಂತೆ ಇತರರ ತೋಟಗಳಿಗೆ ನುಗ್ಗಿ ಕಾಫಿ ಹಾಗೂ ಬಾಳೆ ಫಸಲನ್ನು ಹಾನಿ ಮಾಡಿವೆ.

ಗೊತ್ಲಮಂಟಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಅರಣ್ಯಕ್ಕೆ ತೆರಳುತ್ತಿಲ್ಲ. ಜನವಸತಿ ಹಾಗೂ ಕೃಷಿ ಪ್ರದೇಶಕ್ಕೆ ಲಗ್ಗೆಯಿಟ್ಟು ನಂತರ ಬೀಡುಬಿಟ್ಟಿರುವ ಪ್ರದೇಶಕ್ಕೆ ವಾಪಸ್ ಆಗುತ್ತಿವೆ. ಇವುಗಳನ್ನು ಕಾರ್ಯಾಚರಣೆಯ ಮೂಲಕ ಅರಣ್ಯಕ್ಕೆ ಅಟ್ಟಲು ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.