ಮಡಿಕೇರಿ, ಮೇ ೧೮: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು ಇದು ಮುಂಗಾರು ಮಳೆಯ ಅವಧಿಯನ್ನೇ ನೆನಪಿಸುವಂತಾಗಿದೆ. ಹಲವು ದಿನದಿಂದ ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣವೇ ಕಂಡುಬAದಿಲ್ಲ. ಪ್ರಸ್ತುತದ ಸನ್ನಿವೇಶದಿಂದಾಗಿ ಜಿಲ್ಲೆಯ ಜನತೆ ಪರಿತಪಿಸುವಂತಾಗಿದೆ. ಅದರಲ್ಲೂ ನಿನ್ನೆ ರಾತ್ರಿಯಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಮಳೆಯೊಂದಿಗೆ ಅಲ್ಲಲ್ಲಿ ಕೆಲವಾರು ಹಾನಿಯೂ ಸಂಭವಿಸಿರುವ ಕುರಿತು ವರದಿಯಾಗಿದೆ.

ಹಾರಂಗಿ ಜಲಾಶಯ ಸೇರಿದಂತೆ ಕಾವೇರಿ ಹರಿವಿನ ಪ್ರದೇಶ, ಇನ್ನಿತರ ನದಿ - ತೋಡುಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು ಕಂಡುಬAದಿದೆ. ಕೆಲವೆಡೆ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದಿರುವುದು, ಕೆಲವು ಕೃಷಿ ಫಸಲಿನ ಮೇಲೆ ನೀರು ತುಂಬಿರುವAತಹ ಘಟನೆಗಳು ನಡೆದಿದೆ. ಹಾರಂಗಿ ಜಲಾಶಯದ ನೀರಿನ ಮಟ್ಟದಲ್ಲಿ ಮೇ ೩ನೇ ವಾರದಲ್ಲೇ ಭಾರೀ ಏರಿಕೆಯಾಗಿದೆ. ಬೇಸಿಗೆ ಸಂದರ್ಭವಾದ ಈ ಅವಧಿಯಲ್ಲಿನ ಸಭೆ - ಸಮಾರಂಭ ಗಳು, ಕ್ರೀಡಾಕೂಟಗಳಿಗೂ ಈಗಿನ ವಾತಾವರಣದಿಂದ ಅಡಚಣೆ ಯಾಗಿದೆ.

ಅಣೆಕಟ್ಟೆ ತುಂಬಲು ೭ ಅಡಿ

ಕೂಡಿಗೆ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಈ ಬಾರಿ ಮೇ ತಿಂಗಳಲ್ಲಿ ಭರ್ತಿಯಾಗುವ ಹಂತ ತಲುಪಿದೆ.

ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಹೆಚ್ಚು ಇರುವುದರಿಂದ ಮತ್ತು ಕಳೆದ ಸಾಲಿನಲ್ಲಿ ಅತಿಯಾದ ಮಳೆ ಯಿಂದ ಹೆಚ್ಚು ನೀರು ಸಂಗ್ರಹ ವಾಗಿದ್ದು, ಬೇಸಿಗೆ ಬೆಳೆಗೆ ನೀರನ್ನು ಕಾಲುವೆ ಮೂಲಕ ಹರಿಸಿದರೂ ಸಹ ಸಂಗ್ರಹದ ಮಟ್ಟ ಈ ಬಾರಿ ಹೆಚ್ಚು ಇದೆ. ಕಳೆದ ಒಂದು ವಾರದಿಂದ ಅಣೆಕಟ್ಟೆಯ ಜಲಾನಯನ ಪ್ರದೇಶ ಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣವು ಹೆಚ್ಚಾಗಿ ಈ ಸಾಲಿನಲ್ಲಿ ಅಣೆಕಟ್ಟೆಯು ತುಂಬಲು ೭ ಅಡಿಗಳಷ್ಟು ಮಾತ್ರ ಬಾಕಿ ಇದೆ. ಅಣೆಕಟ್ಟೆಯ ಹಿತದೃಷ್ಟಿಯಿಂದ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುನ್ನೆಚ್ಚರಿಕೆಯಾಗಿ ಒಳಹರಿವಿನ ಪ್ರಮಾಣದ ಆಧಾರದ ಮೇಲೆ ಅಣೆಕಟ್ಟೆಯು ಪೂರ್ಣ ಪ್ರಮಾಣದಲ್ಲಿ ತುಂಬಲು ಇನ್ನೂ ೫ ಅಡಿಗಳಷ್ಟು ಅಂತರವನ್ನು ಕಾಯ್ದಿರಿಸಿ ಹೆಚ್ಚುವರಿ ಯಾಗಿ ಬರುವ ನೀರನ್ನು ನದಿಗೆ ಹರಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗದ ಅಭಿಯಂತರ ಚನ್ನಕೇಶವ ತಿಳಿಸಿದ್ದಾರೆ.

ಇಂದು ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹದ ಮಟ್ಟ ೨೮೪೮.೩೫ ಅಡಿಯಷ್ಟಿದೆ. ಒಳಹರಿವು ೭೬೦ ಕ್ಯೂಸೆಕ್ ಆಗಿದೆ. ನದಿಗೆ ಮತ್ತು ನಾಲೆಗೆ ೪೦ ಕ್ಯೂಸೆಕ್ ನೀರು ಹರಿಯುತ್ತಿದೆ. ಇಂದು ಹಾರಂಗಿ ಭಾಗದಲ್ಲಿ ೫೩.೨ ಮಿಲಿ ಮೀಟರ್ ಮಳೆಯಾಗಿದೆ.

ಅಣೆಕಟ್ಟೆಗೆ ಹೆಚ್ಚು ನೀರು ಬರುತ್ತಿರುವ ಮತ್ತು ಸಂಗ್ರಹದ ಮಟ್ಟದಲ್ಲಿ ಹೆಚ್ಚು ನೀರು ಇರುವುದ ರಿಂದ ನೀರಿನ ಸಾಮರ್ಥ್ಯವನ್ನು ನೋಡಿಕೊಂಡು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸೂಚನೆಯಂತೆ ಅಣೆಕಟ್ಟೆಯು ಪೂರ್ಣ ಪ್ರಮಾಣದಲ್ಲಿ ಭರ್ತಿ ಯಾಗುವ ಹಂತ ತಲುಪುವ ಸಂದರ್ಭ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನದಿಗೆ ನೀರನ್ನು ಹರಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

ಕುಶಾಲನಗರ : ಕಳೆದ ಎರಡು ದಿನಗಳಿಂದ ಕುಶಾಲನಗರ ಪಟ್ಟಣ ಸುತ್ತಮುತ್ತ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನರ ಓಡಾಟಕ್ಕೆ ಅನಾನುಕೂಲ ಉಂಟಾಯಿತು.ಶನಿವಾರಸAತೆ : ಪಟ್ಟಣ ಹಾಗೂ ಹೋಬಳಿಯಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಧಾರಾಕಾರ ಮಳೆ ಸುರಿಯಿತು. ಚರಂಡಿ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಕ್ಷಣ ಬಿಡುವು ನೀಡಿದರೂ, ತಕ್ಷಣ ಜೋರಾಗಿ ಸುರಿಯುತ್ತಿದ್ದ ಮಳೆ, ಬೀಸುವ ಥಂಡಿ ಗಾಳಿ, ಮೈ ನಡುಗಿಸುವ ಚಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಪಟ್ಟಣ ಸೇರಿದಂತೆ ಗುಡುಗಳಲೆ, ಶಿಡಿಗಳಲೆ, ಹಬ್ಬುಲುಸೆ, ಶಾಂತವೇರಿ, ದೊಡ್ಡಬಿಳಾಹ, ಕಾಜೂರು, ದುಂಡಳ್ಳಿ, ಮಾದ್ರೆ, ಮೂದ್ರವಳ್ಳಿ, ಮಾದೇಗೋಡು, ಹೊಸಳ್ಳಿ, ಮುಳ್ಳೂರು, ಮಣಗಲಿ, ಸಂಪಿಗೆದಾಳು ಇತರ ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ.

ಕೂಡಿಗೆ ವ್ಯಾಪ್ತಿಯಲ್ಲಿ ಜಲಾವೃತಗೊಂಡ ಜಮೀನು

ಕೂಡಿಗೆ: ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಸಿದ್ದಲಿಂಗಪುರ, ಸೀಗೆಹೊಸೂರು, ಹಾರಂಗಿ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ಉಳುಮೆ ಮಾಡಿದ ಜಮೀನಿನಲ್ಲಿ ಮತ್ತು ಉಪ ಬೆಳೆಗಳನ್ನು ಬೆಳೆದ ಜಮೀನು ಜಲಾವೃತಗೊಂಡಿವೆ.

ಕೂಡುಮAಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಗೆ ತೆರಳುವ ರಸ್ತೆಯ ಚರಂಡಿಗಳು ಸರಿ ಇಲ್ಲದೆ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿ ಹರಿದು ಮನೆಗಳಿಗೆ ನುಗ್ಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಸರಿಪಡಿಸುವ ವ್ಯವಸ್ಥೆಯನ್ನು ಮಾಡಲಾಯಿತು. ಅಲ್ಲದೆ ಹಾರಂಗಿ ನದಿಗೆ ಕೂಡಿಗೆ ಸರ್ಕಲ್ ಹತ್ತಿರ ನಿರ್ಮಾಣ ಮಾಡಲಾಗಿರುವ ಹಾಸನ-ಕುಶಾಲನಗರ ಹೆದ್ದಾರಿಯ ಸೇತುವೆಯ ಮೇಲೆ ಒಂದು ಅಡಿಗಳಷ್ಟು ಮಳೆ ನೀರು ನಿಂತು ತಿರುಗಾಡುವ ಸಾರ್ವಜನಿಕರಿಗೆ, ಬೈಕ್ ಸವಾರರಿಗೆ ಭಾರೀ ತೊಂದರೆ ಉಂಟಾಯಿತು. ಸಾರ್ವಜನಿಕರ ದೂರಿನ ಮೇರೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ತುರ್ತಾಗಿ ಸೇತುವೆಯಿಂದ ನೀರು ಹೋಗುವ ವ್ಯವಸ್ಥೆ ಮಾಡಲಾಯಿತು.

ಈಗಾಗಲೇ ಮುಸುಕಿನ ಜೋಳ ಬಿತ್ತನೆ ಮಾಡಲು ಸಿದ್ಧವಾಗಿದ್ದ ಜಮೀನಿನಲ್ಲಿ ಹೆಚ್ಚಾಗಿ ಸುರಿದ ಮಳೆಯಿಂದಾಗಿ ಜಮೀನು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಲ್ಲಿ ಬೆಳೆಸಲಾದ ಸಿಹಿ ಗೆಣಸು, ಶುಂಠಿ, ಮೆಣಸಿನಕಾಯಿ ಗಿಡ, ಹೂಕೋಸು, ಎಲೆಕೋಸು ಬೆಳೆಗಳು ನೀರಿನಿಂದ ಜಲಾವೃತಗೊಂಡಿವೆ.

-ಸುನಿಲ್, ನಾಗರಾಜಶೆಟ್ಟಿ, ಸಿಂಚು, ನರೇಶ್, ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು : ಕಳೆದ ನಾಲ್ಕು ದಿನದಿಂದ ಸುರಿಯುತ್ತಿರುವ ಭಾರಿ ಮಳೆ, ಗಾಳಿಯಿಂದಾಗಿ ರಸ್ತೆ ಬದಿಯಲ್ಲಿರುವ ಮರಗಳು ಉರುಳಿ ಬೀಳುತ್ತಿವೆ. ಬುಧವಾರ ಸಂಜೆ ವೇಳೆಯಲ್ಲಿ ಗೋಣಿಕೊಪ್ಪ - ಹಾತೂರು ಮುಖ್ಯ ರಸ್ತೆಯ ಸೇತುವೆ ಬಳಿ ಜೆಸಿಬಿ ವಾಹನವೊಂದು ರಸ್ತೆಯಲ್ಲಿ ಬರುತ್ತಿದ್ದ ವೇಳೆ ದಿಢೀರನೆ ರಸ್ತೆ ಬದಿಯಲ್ಲಿದ್ದ ದೊಡ್ಡ ಮರವೊಂದು ಜೆಸಿಬಿ ಮೇಲೆ ಉರುಳಿ ಬಿದ್ದಿದೆ. ಕೊಂಚ ವ್ಯತ್ಯಾಸವಾಗಿದ್ದಲ್ಲಿ ಜೆಸಿಬಿಯಲ್ಲಿದ್ದ ಚಾಲಕನ ಪ್ರಾಣಕ್ಕೆ ಅಪಾಯ ಸಂಭವಿಸುತ್ತಿತ್ತು.

ಅದೃಷ್ಟಾವಶಾತ್ ಜೆಸಿಬಿ ಚಾಲಿಸುತ್ತಿದ್ದ ಚಾಲಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ರಸ್ತೆಯಎರಡು ಬದಿಯಲ್ಲಿ ಒಣಗಿದ ಹಾಗೂ ಹಸಿ ಮರಗಳು ರಸ್ತೆಗೆ ಹೊಂದಿಕೊAಡAತೆ ಇರುವುದರಿಂದ ಮಳೆ ಗಾಳಿಯಲ್ಲಿ ಇನ್ನಷ್ಟು ಮರಗಳು ರಸ್ತೆಗೆ ಅಡ್ಡಲಾಗಿ ಬೀಳುವ ಸಾಧ್ಯತೆಗಳಿವೆ. ದಿಢೀರನೆ ಬಿದ್ದ ಮರದಿಂದಾಗಿ ಮುಖ್ಯ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸುದ್ದಿ ತಿಳಿದ ಗೋಣಿಕೊಪ್ಪ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಉರುಳಿ ಬಿದ್ದಿದ್ದ ಮರವನ್ನು ತೆರವುಗೊಳಿಸುವ ಮೂಲಕ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. ವಿದ್ಯುತ್‌ತಂತಿಯ ಮೇಲೆ ಮರವು ಬಿದ್ದಿರುವುದರಿಂದ ಈ ಭಾಗದಲ್ಲಿ ವಿದ್ಯುತ್ ಸಂಚಾರಕ್ಕೆ ಹಿನ್ನೆಡೆಯಾಯಿತು.

ಜೆಸಿಬಿಯು ಜೈಹಿಂದ್ ಟ್ರೇರ‍್ಸ್ನ ಮಾಲೀಕರಿಗೆ ಸೇರಿದ್ದು ರೂ. ೯ ಲಕ್ಷ ನಷ್ಟ ಸಂಭವಿಸಿದೆ ಎಂದು ಜೆಸಿಬಿಯ ಮಾಲೀಕರು ತಿಳಿಸಿದ್ದಾರೆ. ಮರ ಬಿದ್ದು ಗಂಟೆಗಳು ಕಳೆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸದೆ ಇರುವುದನ್ನು ಸಾರ್ವಜನಿಕರು ಖಂಡಿಸಿದ್ದಾರೆ.ಕುಶಾಲನಗರ : ಕುಶಾಲನಗರ ಸಮೀಪದ ಕೊಪ್ಪ ಗ್ರಾಮದಲ್ಲಿ ಟಿಬೆಟಿಯನ್ ನಿರಾಶ್ರಿತರ ಶಿಬಿರ ಮತ್ತು ಹತ್ತಕ್ಕೂ ಅಧಿಕ ಹಳ್ಳಿಗಳಿಗೆ ತೆರಳುವ ಮುಖ್ಯ ರಸ್ತೆ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಕೊಚ್ಚಿ ಹೋಗಿದ್ದು ಸಂಚಾರ ವ್ಯವಸ್ಥೆ ಕಡಿತಗೊಂಡಿದೆ.