*ಸಿದ್ದಾಪುರ, ಮೇ ೧೭ : ಇದು ಬಲಗೈಯಲ್ಲಿ ನೀಡಿ ಎಡಗೈಯಲ್ಲಿ ಕಸಿದುಕೊಂಡ ಪ್ರಸಂಗ. ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ತ್ಯಾಗತ್ತೂರು ನಿವಾಸಿ ವಿಶೇಷಚೇತನ ಕೆ.ವಿ. ಬಾಲಕೃಷ್ಣ ಅವರಿಗೆ ತ್ರಿಚಕ್ರ ವಾಹನವಿದೆ ಎನ್ನುವ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ.
ವಿಲಚೇತನರ ಕಲ್ಯಾಣ ಇಲಾಖೆಯಿಂದ ಇವರಿಗೆ ತ್ರಿಚಕ್ರ ವಾಹನವನ್ನು ನೀಡಲಾಗಿತ್ತು. ಬಾಲಕೃಷ್ಣ ಅವರ ಸಂಚಾರಕ್ಕೆ ಸಹಕಾರಿಯಾಗಲಿ ಎಂದು ಸರಕಾರವೇ ಈ ವಾಹನವನ್ನು ನೀಡಿದೆ. ಆದರೆ ಪಡಿತರ ಚೀಟಿ ಸರ್ವೆ ನಡೆಸಿದ ಅಧಿಕಾರಿಗಳು ತ್ರಿಚಕ್ರದ ವಾಹನವಿದೆ ಎಂದು ಬಿಪಿಎಲ್ ಕಾರ್ಡನ್ನೇ ರದ್ದು ಮಾಡಿದ್ದಾರೆ. ಅಧಿಕಾರಿಗಳ ಈ ನಿರ್ಧಾರದಿಂದಾಗಿ ಬಡತನದಲ್ಲಿರುವ ಬಾಲಕೃಷ್ಣ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪಡಿತರ ಚೀಟಿ ಇಲ್ಲದೆ ಆಹಾರ ಸಾಮಾಗ್ರಿ ಖರೀದಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪುತ್ರಿಯನ್ನು ವಿವಾಹ ಮಾಡಲಾಗಿದ್ದು, ಇವರು ಹಾಗೂ ಪತ್ನಿ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇರಲು ಸ್ವಂತ ಸೂರಿಲ್ಲದೆ ಪರದಾಡುತ್ತಿರುವ ಬಾಲಕೃಷ್ಣ ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ವಿಶೇಷಚೇತನರಿಗೆ ಆಪತ್ಕಾಲ ಬಾಂಧವರಾಗಿದ್ದಾರೆ. ಗ್ರಾಮದ ವಿಕಲಚೇತನರ ಸಂಘದ ಅಧ್ಯಕ್ಷರಾಗಿರುವ ಇವರು ವಿಕಲಚೇತನರಿಗಾಗಿ ಇರುವ ಸರಕಾರಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡುವುದಕ್ಕಾಗಿ ನಿತ್ಯ ಶ್ರಮಿಸುತ್ತಾರೆ. ಅಲ್ಲದೆ ಈ ಕಾಯಕದಲ್ಲಿ ಯಶಸ್ಸನ್ನೂ ಸಾಧಿಸಿ ಜನ ಮೆಚ್ಚುಗೆ ಪಡೆದಿದ್ದಾರೆ. ಆದರೆ ದುರಾದೃಷ್ಟವಶಾತ್ ತಮ್ಮ ಬಳಿ ಇದ್ದ ಬಿಪಿಎಲ್ ಪಡಿತರ ಚೀಟಿಯೇ ರದ್ದಾಗಿದೆ ಚಿಂತೆಗೀಡಾಗಿದ್ದಾರೆ. - ಅಂಚೆಮನೆ ಸುಧಿ