ಸಿದ್ದಾಪುರ ಮೇ ೧೭ : ಪೊನ್ನಂಪೇಟೆಯ ಸಾಯಿ ಶಂಕರ ಶಾಲೆಯಲ್ಲಿ ಭಜರಂಗದಳದ ಪ್ರಶಿಕ್ಷಣ ವರ್ಗದಲ್ಲಿ ತ್ರಿಶೂಲ ದೀಕ್ಷೆ ಹಾಗೂ ಬಂದೂಕು ತರಬೇತಿ ನೀಡಿರುವ ಕುರಿತಾಗಿ ಎಸ್‌ಡಿಪಿಐ ಪಕ್ಷ ನೀಡಿರುವ ಹೇಳಿಕೆಗೆ ಪ್ರತ್ಯುತ್ತರ ಪಡೆದುಕೊಳ್ಳಲು ಅವರು ಅಷ್ಟೊಂದು ದೊಡ್ಡವರಲ್ಲ. ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ಉತ್ತರ ಕೊಡಲು ನಾನು ಸಿದ್ಧನಿಲ್ಲ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಸಿದ್ದಾಪುರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭಜರಂಗದಳ ನಡೆಸಿದ ತ್ರಿಶೂಲ ದೀಕ್ಷೆ ಹಾಗೂ ಬಂದೂಕು ತರಬೇತಿ ಕುರಿತಾಗಿ ಶುರುವಾದ ಟೀಕೆಗಳು ಅಪ್ರಯೋಜಕ. ಇಲ್ಲಿ ಯಾವುದೇ ಕಾನೂನು ಬಾಹಿರವಾದ ಚಟುವಟಿಕೆಗಳು ನಡೆದಿಲ್ಲ. ಸಂಘಟನೆಯು ಕಾರ್ಯಕರ್ತರ ಸ್ವರಕ್ಷಣೆಗಾಗಿ ಅಭ್ಯಾಸಗಳನ್ನು ಮಾಡುತ್ತಿದ್ದಾರೆ. ಪ್ರತೀ ವರ್ಷ ಕೂಡ ಪ್ರಶಿಕ್ಷಣ ವರ್ಗ ನಡೆಯುತ್ತಿದೆ. ಈ ವರ್ಷ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು ಸಿದ್ದರಾಮಯ್ಯನವರ ಹೇಳಿಕೆಯು ಮುಸಲ್ಮಾನರ ಓಲೈಕೆಯಾಗಿದ್ದು, ಸಿದ್ದರಾಮಯ್ಯನವರಿಂದ ಸಂವಿಧಾನದ ಪಾಠ ತಿಳಿದುಕೊಳ್ಳುವ ಅವಶ್ಯಕತೆ ನಮಗೆ ಇಲ್ಲ. ಸಿದ್ದರಾಮಯ್ಯನವರು ಮತ ಬ್ಯಾಂಕ್‌ಗಾಗಿ ಮುಸಲ್ಮಾನರ ಓಲೈಕೆ ಮಾಡುತ್ತಾ ಹಿಂದೂ ಸಮಾಜವನ್ನು ವಿರೋಧಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.