ಕೂಡಿಗೆ, ಮೇ ೧೫: ಹೆಬ್ಬಾಲೆ ಬಸವೇಶ್ವರ ಯುವಕರ ಬಳಗ ವತಿಯಿಂದ ನಡೆದ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಹೊನಲು ಬೆಳಕಿನ ಪ್ರಥಮ ವರ್ಷದ ರಾಜ್ಯದ ಮಟ್ಟದ ಕರುಗಳ ಜೋಡಿ ಗಾಡಿ ಓಟದ ಸ್ಪರ್ಧೆಯು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಎತ್ತಿನ ಗಾಡಿಯನ್ನು ಓಡಿಸುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ದೇಸೀಯ ಕ್ರೀಡಾಕೂಟಗಳಿಗೆ ಹೆಚ್ಚು ಒತ್ತು ನೀಡಲು ಇಂತಹ ಕ್ರೀಡಾ ಕೂಟಗಳು ಸಹಕಾರಿಯಾಗಿದೆ. ಇದರ ಮುಖೇನ ಗ್ರಾಮಸ್ಥರು ಒಂದೆಡೆ ಸೇರಲು ಸಹಕಾರಿಯಾಗಿದೆ. ಸರಕಾರವು ದೇಶೀಯ ಕ್ರೀಡಾ ಕೂಟಗಳಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ಮಾತಾಡಿದರು. ರಾಜ್ಯ ಮಟ್ಟದ ಕರುಗಳ ಜೋಡಿಗಾಡಿ ಓಟದಲ್ಲಿ ಜಿಲ್ಲೆಯ ೩೫ ಜೋಡಿ ಕರುಗಳ ತಂಡಗಳು ಭಾಗವಹಿಸಿದ್ದವು.

ಇದರಲ್ಲಿ ಚೌಡನಹಳ್ಳಿನ ಪ್ರದೀಪ್‌ನ ಕರು ಜೋಡಿ ಪ್ರಥಮ ಸ್ಥಾನವನ್ನು ಪಡೆದು ನಗದು ೩೦,೦೦೦ ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡರು.

ದ್ವಿತೀಯ ಸ್ಥಾನವನ್ನು ಹಾರನಹಳ್ಳಿ ಪುನಿತ್ ತಂಡದ ಕರುಗಳು ಪಡೆದರೆ, ಮೂರನೆಯ ಸ್ಥಾನವನ್ನು ಹೆಬ್ಬಾಲೆ ಹಳೇಕೋಟೆಯ ಜಗಣ್ಣ ತಂಡ, ನಾಲ್ಕನೇ ಸ್ಥಾನವನ್ನು ಹೊಳೆ ನರಸೀಪುರ ತಂಡ ಪಡೆದುಕೊಂಡಿತು.

ಈ ಸಂದರ್ಭ ಹೆಬ್ಬಾಲೆ ಗ್ರಾ.ಪಂ. ಉಪಾಧ್ಯಕ್ಷೆ ಅರುಣಕುಮಾರಿ, ಸದಸ್ಯರಾದ ಮಹದೇವ, ಚಂದ್ರಶೇಖರ ಜೋಗಿ, ಪರಮೇಶ್ ನಾರಾಯಣ ಧನುಕುಮಾರ್ ಬಸವೇಶ್ವರ ಬಳಗದ ಪ್ರಮುಖರಾದ ಪಟೇಲ್ ಜಗದೀಶ್, ಅಕ್ಷಯ್, ಮೊಗಣ್ಣ ಅಭಿ, ಜವರೇಗೌಡ್ರ ರಘು ನಂದನ್ ಸುದರ್ಶನ್ ಸೇರಿದಂತೆ ಬಳಗದ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.