ಸೋಮವಾರಪೇಟೆ, ಮೇ. ೧೫: ಅರಣ್ಯ ಇಲಾಖೆ ಮೂಲಕ ಪ್ರಗತಿಯಲ್ಲಿರುವ ರೈಲ್ವೇ ಬ್ಯಾರಿಕೇಡ್ ಕಾಮಗಾರಿ ಅಸಮರ್ಪಕವಾಗಿದ್ದು, ಕಾಡಾನೆಗಳು ಹೆಚ್ಚಿನ ಹಾವಳಿ ಮಾಡುತ್ತಿರುವ ಕಡೆಗಳಲ್ಲಿ ಅಳವಡಿಸದೇ ಕಾರ್ಪೋರೇಟ್ ಕಂಪೆನಿಯ ತೋಟ ಇರುವ ಜಾಗದಲ್ಲಿ ಅಳವಡಿಸಲಾಗುತ್ತಿದೆ ಎಂದು ಆರೋಪಿಸಿ ರೈತ ಸಂಘದ ವತಿಯಿಂದ ಸಚಿವರಿಗೆ ದೂರು ನೀಡಲಾಗಿದೆ.
ಕಾಡಾನೆಗಳ ಹಾವಳಿಯಿಂದ ಜನ ಸಾಮಾನ್ಯರು ಹಾಗೂ ಕೃಷಿ ಫಸಲನ್ನು ರಕ್ಷಿಸಲು ಅಳವಡಿಸಬೇಕಿದ್ದ ರೈಲ್ವೇ ಬ್ಯಾರಿಕೇಡ್‌ಗಳನ್ನು ಖಾಸಗಿ ಕಂಪೆನಿಯ ತೋಟದ ಬಳಿ ಅಳವಡಿಸುವ ಮೂಲಕ ಪ್ರಭಾವಿಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ತಕ್ಷಣ ಕಾಮಗಾರಿಯನ್ನು ತಡೆಹಿಡಿದು ಜನಸಾಮಾನ್ಯರು ಹಾಗೂ ಬಡ ರೈತರಿಗೆ ಉಪಯೋಗ ಆಗುವ ಸ್ಥಳದಲ್ಲಿ ಅಳವಡಿಸಬೇಕೆಂದು ರೈತ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ತಾಲೂಕಿನ ಕಾಜೂರು ಗ್ರಾಮದ ಸಜ್ಜಳ್ಳಿ ಹಾಡಿಯ ಮಾಸ್ತಿ ಮನೆಯಿಂದ ಕುಸುಬೂರು ಗ್ರಾಮದವರೆಗೆ ೬.೫ ಕಿ.ಮೀ. ರೈಲ್ವೇ ಬ್ಯಾರಿಕೇಡ್ ಅಳವಡಿಸಲು ಅನುದಾನ ಮಂಜೂರಾಗಿದೆ. ಆದರೆ ಸಜ್ಜಳ್ಳಿಯಿಂದ ಕಾಮಗಾರಿ ಪ್ರಾರಂಭಿಸದೇ ಟಾಟಾ ಕಾಫಿ ಕಂಪೆನಿಗೆ ಸೇರಿದ ತೋಟದ ಬಳಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ ಎಂದು ರೈತ ಸಂಘದ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಲಕ್ಷö್ಮಣ್, ಯಡವಾರೆ ಅಶೋಕ್ ಸೇರಿದಂತೆ ಇತರರು ದೂರಿದ್ದಾರೆ.
ಸಜ್ಜಳ್ಳಿ, ಯಡವಾರೆ, ಕಾಜೂರು ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದೆ. ಈ ಭಾಗದಲ್ಲಿ ನೂರಾರು ಬಡ ರೈತ ಕುಟುಂಬಗಳಿವೆ. ದಿನನಿತ್ಯ ಕಾಡಾನೆಗಳು ಕೃಷಿ ಫಸಲು ನಷ್ಟಗೊಳಿಸುತ್ತಿವೆ. ಈ ಹಿನ್ನೆಲೆ ಸಜ್ಜಳ್ಳಿಯಿಂದ ಕಾಮಗಾರಿ ಆರಂಭಿಸಬೇಕು. ತಪ್ಪಿದಲ್ಲಿ ರೈತ ಸಂಘದಿAದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂಬAಧಿತ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್, ಶಾಸಕ ಅಪ್ಪಚ್ಚುರಂಜನ್, ಅರಣ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ವಲಯ ಅರಣ್ಯಾಧಿಕಾರಿಗಳಿಗೆ ಸಲ್ಲಿಸಿರುವ ರೈತ ಸಂಘದ ಮುಖಂಡರು, ಕ್ರಮಕ್ಕೆ ಮನವಿ ಮಾಡಿದ್ದಾರೆ.