ಮಡಿಕೇರಿ, ಮೇ ೧೪: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ಗೆ ರೋಟರಿ ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ತಾ. ೧೭ ರಂದು ಅಧಿಕೃತ ಭೇಟಿ ನೀಡಲಿದ್ದಾರೆ.

ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ನಗರಸಭೆ ವತಿಯಿಂದ ಉದ್ದೇಶಿತ ಸ್ವಾಗತ ಕಮಾನುಗಳನ್ನು ರೋಟರಿ ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿಯಿರುವ ರೋಟರಿ ಮಿಸ್ಟಿ ಹಿಲ್ಸ್ ಉದ್ಯಾನವ ನದಲ್ಲಿ ಅನಾವರಣಗೊಳಿಸಲಿದ್ದಾರೆ.

ಅಂದು ಮಧ್ಯಾಹ್ನ ೧೧ ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ಬಾಲಕ ಮತ್ತು ಬಾಲಕಿಯರ ಸರ್ಕಾರಿ ಬಾಲಮಂದಿರ ಹಾಗೂ ಜಿಲ್ಲಾ ಶಿಶುಕಲ್ಯಾಣ ಸಂಸ್ಥೆಯ ಮಕ್ಕಳಿಗೆ ಕೊಡುಗೆ ನೀಡುವ ಕಾರ್ಯಕ್ರಮವಿದ್ದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್, ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಸಹಾಯಕ ಕಾರ್ಯದರ್ಶಿ ಹೆಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಜಗದೀಶ್ ಪ್ರಶಾಂತ್, ಮಡಿಕೇರಿ ರೋಟರಿ ಕಾರ್ಯದರ್ಶಿ ಲಲಿತಾ ರಾಘವನ್ ಸೇರಿದಂತೆ ರೋಟರಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಸ್ವೀವರ್ಟ್ ಹಿಲ್ ಬಳಿಯ ಅಂಗನವಾಡಿ ಮಕ್ಕಳಿಗೂ ಮಿಸ್ಟಿ ಹಿಲ್ಸ್ ವತಿಯಿಂದ ರಾಜ್ಯಪಾಲರು ಕೊಡುಗೆ ನೀಡಲಿದ್ದಾರೆ.

ಅಂದು ಸಂಜೆ ೭ ಗಂಟೆಗೆ ಮಡಿಕೇರಿ ಗೌಡ ಸಮಾಜದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಸಾಧಕರನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಗುತ್ತದೆ. ಮಡಿಕೇರಿ ನಗರ ಸಂಚಾರಿ ಪೊಲೀಸ್ ಅಧಿಕಾರಿ ನಂದಾ, ಮಡಿಕೇರಿ ನಗರಸಭೆಯ ಹಿರಿಯ ಪೌರಕಾರ್ಮಿಕ ಹನುಮಂತಪ್ಪ ಯುವ ಪ್ರತಿಭೆ ಸುಂಟಿಕೊಪ್ಪದ ಶ್ರೀಶಾ ಅವರನ್ನು ರೋಟರಿ ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ಸನ್ಮಾನಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ರೋಟರಿ ಮಡಿಕೇರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯದರ್ಶಿ ಪಿ.ಆರ್. ರಾಜೇಶ್ ತಿಳಿಸಿದ್ದಾರೆ.