ಮರಗೋಡು, ಮೇ ೧೨: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಮರಗೋಡಿನಲ್ಲಿ ನಡೆಯುತ್ತಿರುವ ಗೌಡ ಕುಟುಂಬಗಳ ನಡುವಣ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಲಿಷ್ಠ ಬಡುವಂಡ್ರ ಮತ್ತು ಕಾಂಗೀರ ತಂಡಗಳು ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿವೆ. ಇಂದು ನಡೆದ ನಾಲ್ಕನೆ ದಿನದಾಟದ ಮೊದಲ ಪಂದ್ಯದಲ್ಲಿ ಕೂಡಕಂಡಿ ತಂಡವನ್ನು ೫-೦ ಗೋಲುಗಳಿಂದ ಮಣಿಸಿದ ಕಾಂಗೀರ ತಂಡ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿತು. ಎರಡನೇ ಪಂದ್ಯದಲ್ಲಿ ಮರದಾಳು ಬಿ ತಂಡ ನಂಗಾರು ಮನೆ ವಿರುದ್ಧ ೩-೦ ಗೋಲುಗಳಿಂದ ಸೋಲನುಭವಿಸಿತು.

ಮೂರನೇ ಪಂದ್ಯದಲ್ಲಿ ಮರದಾಳು ಎ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಕಾನಡ್ಕ ತಂಡವನ್ನು ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು.

ದಿನದ ನಾಲ್ಕನೇ ಪಂದ್ಯದಲ್ಲಿ ಬಲಿಷ್ಠ ಬಡುವಂಡ್ರ ತಂಡ ಬೈಲೆಮನೆ ತಂಡವನ್ನು ೩-೦ ಗೋಲುಗಳಿಂದ ಮಣಿಸಿ ಎರಡನೇ ಹಂತಕ್ಕೆ ಲಗ್ಗೆ ಇಟ್ಟಿತು.

ಐದನೇ ಪಂದ್ಯದಲ್ಲಿ ಕಾಂಗೀರ ಮತ್ತು ನಂಗಾರು ತಂಡಗಳು ರೋಚಕ ಹೋರಾಟ ನಡೆಸಿ ೧-೧ ಗೋಲುಗಳ ಸಮಬಲ ಸಾಧಿಸಿದವು. ಕೊನೆಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಕಾಂಗೀರ ತಂಡ ಜಯಗಳಿಸಿ ಮೂರನೇ ಸುತ್ತು ಪ್ರವೇಶಿಸಿತು.

ದಿನದ ಆರನೇ ಪಂದ್ಯದಲ್ಲಿ ಬಡುವಂಡ್ರ ತಂಡ ಮರದಾಳು ತಂಡವನ್ನು ೬-೧ ಗೋಲುಗಳಿಂದ ಸೋಲಿಸಿತು. ಮಿಂಚಿನ ಆಟವಾಡಿದ ಬಡುವಂಡ್ರ ದುಷ್ಯಂತ್ ಐದು ಗೋಲು ಬಾರಿಸಿ ಜಯದ ರೂವಾರಿಯಾದರು.