ಡಿಸಿ ನಿರ್ದೇಶನ ಅಧಿಕಾರಿಗಳ ಭೇಟಿ
ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವುದನ್ನು ಮನಗಂಡ ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು, ಕೊಡಗು ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿ ಐಟಿಡಿಪಿ ಇಲಾಖೆಯ ಹೊನ್ನೆಗೌಡ ಹಾಗೂ ಪೊನ್ನಂಪೇಟೆ ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಡಿ.ಜಿ. ಗುರುಶಾಂತಪ್ಪ ಇವರುಗಳನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿ ಸಮಗ್ರ ಮಾಹಿತಿ ನೀಡಲು ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪ್ರತಿಭಟನಾ ನಿರತರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದಾರೆ.ಆಶ್ರಯ ಪಡೆದು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಾಣಂತಿಯರು, ಮಹಿಳೆಯರು ಹೆಚ್ಚಾಗಿ ಸೇರಿಕೊಂಡಿದ್ದಾರೆ. ಸರಿಯಾದ ಊಟದ ವ್ಯವಸ್ಥೆ ಇಲ್ಲದೆ ಸಹಜವಾಗಿಯೇ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಆದಿವಾಸಿ ಮುಖಂಡ ಸಣ್ಣಯ್ಯ ಎಂಬವರು ವಿಪರೀತ ಚಳಿಗಾಳಿಯಿಂದ ಅಸ್ವಸ್ಥಗೊಂಡಿದ್ದು ಗುರುವಾರ ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಡಿಯ ಮುಖಂಡರು ಸಣ್ಣಯ್ಯ ಅವರನ್ನು ತಮ್ಮ ಬೈಕಿನಲ್ಲಿ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿಗದಿತ ವೇಳೆಯಲ್ಲಿ ಪ್ರತಿಭಟನಾ ನಿರತರಿಗೆ ಸರಿಯಾದ ರೀತಿಯಲ್ಲಿ ಅರಣ್ಯ ಇಲಾಖೆಯು ಆಹಾರ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಪ್ರತಿಭಟನಾ ಸ್ಥಳಕ್ಕೆ ಮೈಸೂರು ಜಿಲ್ಲೆಯ ಗಿರಿಜನ ಕಲ್ಯಾಣಾಧಿಕಾರಿ ಪ್ರಭಾ ಹಾಗೂ ಹೆಚ್.ಡಿ. ಕೋಟೆ ತಾಲೂಕು ಗಿರಿಜನ ಕಲ್ಯಾಣಾಧಿಕಾರಿ ಎಂ.ಟಿ. ನಾರಾಯಣಸ್ವಾಮಿ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ನಡೆಸಿದರು. ಮಾಸ್ತಿಗುಡಿ ಪುರ್ನವಸತಿ ಕೇಂದ್ರದಲ್ಲಿ ಭೂಮಿಯ ಸಮತಟ್ಟು ಕಾರ್ಯ ನಡೆಯುತ್ತಿದೆ. ಮಳೆಯಲ್ಲಿ ಪ್ರತಿಭಟನೆ ನಡೆಸಿ ಆರೋಗ್ಯ ಹಾಳು ಮಾಡಿಕೊಳ್ಳದಂತೆ ಅಧಿಕಾರಿಗಳು ಆದಿವಾಸಿಗಳನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಇವರ ಮಾತಿಗೆ ಪ್ರತಿಭಟನೆ ನೇತೃತ್ವ ವಹಿಸಿರುವ ಜೇನುಕುರುಬರ ಅಯ್ಯಪ್ಪ ಗಿರಿಜನರ ಅಭಿವೃದ್ಧಿಗೆ ಸರ್ಕಾರ ಇಲಾಖೆಯನ್ನು ಅನುಷ್ಠಾನಗೊಳಿಸಿ ಅಧಿಕಾರಿಗಳನ್ನು ನೇಮಿಸಿದೆ. ಆದರೆ ಅಧಿಕಾರಿಗಳು ಗಿರಿಜನರ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ.
ಕೇವಲ ಆಡು, ಕುರಿ, ಹಸು ಇತ್ಯಾದಿಗಳನ್ನು ನೀಡಿ ಇಲಾಖೆಯ ಕಾರ್ಯಕ್ರಮವೆಂದು ನುಣುಚಿ ಕೊಳ್ಳುತ್ತಿರುವುದು ನಡೆಯುತ್ತಲೇ ಬಂದಿದೆ. ಇದೀಗ ಹೋರಾಟ ಕ್ಕಿಳಿದಿದ್ದೇವೆ. ನ್ಯಾಯ ಪಡೆದೆ ಇಲ್ಲಿಂದ ಹೊರಡುತ್ತೇವೆ. ಯಾವುದೇ ಕಾರಣಕ್ಕೂ ಮನವೊಲಿಸುವ ಪ್ರಯತ್ನ ಮಾಡದಿರಿ ಎಂದು ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳನ್ನು ವಾಪಸ್ಸು ಕಳುಹಿಸಿದರು. ಅಡುಗುಂಡಿಯಲ್ಲಿ ನಡೆಯುತ್ತಿರುವ ಆದಿವಾಸಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ವೀರಾಜಪೇಟೆ ತಾಲೂಕಿನ ಯರವ ಸಮಾಜದ ಅಧ್ಯಕ್ಷ ವೈ.ಎಂ.ರವಿ ಹಾಗೂ ಸದಸ್ಯ ರೂಪೇಶ್ ಭೇಟಿ ನೀಡಿದರು.
ವಿಪರೀತ ಮಳೆ ಗಾಳಿಯಿಂದ ಹಲವು ಮಂದಿ ಅಸ್ವಸ್ಥಗೊಂಡಿರುವುದನ್ನು ಮನಗಂಡ ಅಧಿಕಾರಿಗಳು ಪ್ರತಿಭಟನಾ ನಿರತರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ಪ್ರತಿನಿತ್ಯ ಪ್ರತಿಭಟನಾ ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ತೆರಳುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಪತ್ರ ರವಾನೆ ಮಾಡಿದ್ದಾರೆ. ಶುಕ್ರವಾರದಿಂದ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಲಿದ್ದು ಆದಿವಾಸಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.
-ಹೆಚ್.ಕೆ. ಜಗದೀಶ್