ಸೋಮವಾರಪೇಟೆ, ಮೇ ೧೨: ತನ್ನ ಮಗಳನ್ನು ಕಲ್ಯಾಣ ಮಂಟಪದಲ್ಲಿ ಅದ್ಧೂರಿ ಮದುವೆ ಮಾಡಿದ ಅಪ್ಪ, ಕೆಲ ಗಂಟೆಗಳಲ್ಲೇ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ ಘಟನೆ ಸಮೀಪದ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದೆ.

ಕಿಬ್ಬೆಟ್ಟ ಗ್ರಾಮ ನಿವಾಸಿ, ಕೃಷಿಕ ಎಂ.ಪಿ. ಚಿಣ್ಣಪ್ಪ (ಸೋಮ-೬೦) ಎಂಬವರೇ ತನ್ನ ಮಗಳ ವಿವಾಹ ದಿನದಂದೆ ಸಾವನ್ನಪ್ಪಿದ ದುರ್ದೈವಿ.

ಚಿಣ್ಣಪ್ಪ ಅವರು ತಮ್ಮ ಪುತ್ರಿ ಮೇಘಾಳ ವಿವಾಹವನ್ನು ಬೆಳಗಾಂನ ಗೋಕಾಕ್ ಮೂಲದ ಯುವಕನೊಂದಿಗೆ ಪಟ್ಟಣದ ಕಲ್ಯಾಣ ಮಂಟಪವೊAದರಲ್ಲಿ ಇಂದು ಅದ್ಧೂರಿಯಾಗಿ ನಡೆಸಿದ್ದರು. ಮದುವೆಗೆ ಆಗಮಿಸಿದ್ದ ನೆಂಟರಿಷ್ಟರನ್ನು, ಆಹ್ವಾನಿತರನ್ನು ಸಂಭ್ರಮದಿAದ ಸ್ವಾಗತಿಸಿ ಆತಿಥ್ಯ ನೀಡಿದ್ದ ಚಿಣ್ಣಪ್ಪ ಅವರು, ಮಗಳನ್ನು ಅಳಿಯನ ಮನೆಗೆ ಕಳುಹಿಸಿಕೊಟ್ಟಿದ್ದರು.

ಇದಾದ ಕೆಲ ಸಮಯದಲ್ಲಿ ಮಂಟಪದಲ್ಲಿದ್ದ ಸಾಮಗ್ರಿಗಳನ್ನು ಮನೆಗೆ ಸಾಗಿಸಲು ಮುಂದಾಗಿದ್ದರು. ವಾಹನದಲ್ಲಿ ಸಾಮಗ್ರಿಗಳನ್ನು ತುಂಬಿಸಿ ಮನೆಗೆ ಕಳುಹಿಸಿದ್ದ ಚಿಣ್ಣಪ್ಪ ಅವರು, ಎರಡನೆ ಬಾರಿಗೆ ಉಳಿದಿದ್ದ ಸಾಮಗ್ರಿಗಳನ್ನು ವಾಹನದಲ್ಲಿ ಹಾಕಿಕೊಂಡು ಕಿಬ್ಬೆಟ್ಟಕ್ಕೆ ಹೊರಟಿದ್ದರು. ಪಟ್ಟಣದ ಹೊರವಲಯದಲ್ಲಿರುವ ಆನೆಕೆರೆಯಿಂದ ಕಿಬ್ಬೆಟ್ಟ ಗ್ರಾಮಕ್ಕೆ ತೆರಳುವ ಸಂದರ್ಭ ದಿಢೀರನೇ ಎದೆ ನೋವು ಕಾಣಿಸಿಕೊಂಡಿದ್ದು, ವಾಹನದಲ್ಲಿದ್ದ ಇತರರು ತಕ್ಷಣ ಆಸ್ಪತ್ರೆಗೆ ಕರೆತಂದಿದ್ದಾರೆ. ಚಿಣ್ಣಪ್ಪ ಅವರನ್ನು ಪರೀಕ್ಷಿಸಿದ ವೈದ್ಯರು, ಅಷ್ಟರಲ್ಲಾಗಲೇ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ.

ಮಗಳ ಮದುವೆ ದಿನವೇ ತಂದೆ ಇಹಲೋಕ ತ್ಯಜಿಸಿದ ದುರಂತ ಘಟನೆಯಿಂದ ಕುಟುಂಬಸ್ಥರು ದಿಗ್ಭçಮೆಗೆ ಒಳಗಾಗಿದ್ದು, ಸಂಭ್ರಮವಿದ್ದ ಮನೆಯಲ್ಲಿ ಶೋಕಸಾಗರ ಮಡುಗಟ್ಟಿದೆ. ಪತಿಯೊಂದಿಗೆ ಗೋಕಾಕ್‌ನತ್ತ ಪ್ರಯಾಣ ಬೆಳೆಸಿದ್ದ ನವ ವಧು ಮೇಘಾ, ಕೊಡ್ಲಿಪೇಟೆಗೆ ತಲುಪುತ್ತಿದ್ದಂತೆ ಅಪ್ಪನ ದುರಂತ ವಾರ್ತೆ ಕಿವಿಗಪ್ಪಳಿಸಿದ್ದು, ಮನೆಗೆ ವಾಪಾಸಾಗಿದ್ದಾರೆ. ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಮೃತ ಚಿಣ್ಣಪ್ಪ ಅವರು ಪತ್ನಿ ಜಾನಕಿ ಸೇರಿದಂತೆ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.