ಸೋಮವಾರಪೇಟೆ, ಮೇ ೧೩: ಮೂಲಭೂತ ಕಾನೂನುಗಳ ಬಗ್ಗೆ ಪ್ರತಿಯೊಬ್ಬ ಪ್ರಜೆಗೂ ಅರಿವು ಇರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್. ಸುಬ್ರಮಣ್ಯ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆಯ ವತಿಯಿಂದ ಪಟ್ಟಣದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಉಚಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಮೂಲಭೂತ ಕಾನೂನುಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ಕಾನೂನು ಸೇವಾ ಪ್ರಾಧಿಕಾರದಿಂದ ಆಗುತ್ತಿದೆ. ಹಳ್ಳಿ ಹಳ್ಳಿಗೆ ಹೋಗಿ ಉಚಿತ ಕಾನೂನು ನೆರವು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಮಹಿಳೆಯರು, ಮಕ್ಕಳು, ಅಂಗವಿಕಲರು, ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ಥರು, ಗಲಭೆ ಸಂತ್ರಸ್ತರು, ಪರಿಶಿಷ್ಟ ಜಾತಿ, ಪಂಗಡದವರು ಉಚಿತ ಕಾನೂನು ನೆರವು ಪಡೆದುಕೊಳ್ಳಬಹುದು. ಪ್ರಾಧಿಕಾರದಿಂದ ನೇಮಕವಾದ ವಕೀಲರು ಉಚಿತ ಸೇವೆ ಒದಗಿಸಲಿದ್ದಾರೆ. ರೂ. ೩ ಲಕ್ಷ ಒಳಗಿನ ಆದಾಯವಿರುವ ಎಲ್ಲ ಪ್ರಜೆಗಳಿಗೂ ಉಚಿತ ಕಾನೂನು ನೆರವು ಸಿಗಲಿದೆ. ಸ್ಥಳೀಯ ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಸಮಿತಿ ಇದೆ ಎಂದರು.

ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ವಕೀಲೆ ಹೆಚ್.ಆರ್. ಪವಿತ್ರ ಉಪಸ್ಥಿತರಿದ್ದರು.