ಸೋಮವಾರಪೇಟೆ, ಮೇ ೧೩: ಪಟ್ಟಣದ ಪತ್ರಿಕಾಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ನಾಗರಿಕರ ಸಭೆಯಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು, ಪಟ್ಟಣದ ಟ್ರಾಫಿಕ್ ಸಮಸ್ಯೆಗಳ ಬಗ್ಗೆ ಇಲಾಖಾಧಿಕಾರಿಗಳ ಎದುರು ಪ್ರಸ್ತಾಪಿಸಿದರು.

ಮುಖ್ಯ ರಸ್ತೆಯ ಬಾರ್‌ವೊಂದರ ಸಮೀಪದ ರಸ್ತೆಯಲ್ಲಿ ಬೈಕ್‌ಗಳನ್ನು ನಿಲ್ಲಿಸಿರುತ್ತಾರೆ. ಪಾನಮತ್ತರು ರಸ್ತೆಯಲ್ಲೆ ನಿಂತು ವಾಗ್ವಾದ ಮಾಡುತ್ತಿರುತ್ತಾರೆ. ಸಂಜೆ ವೇಳೆಗೆ ಈ ರಸ್ತೆಯಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಪಟ್ಟಣದಲ್ಲಿ ಟ್ರಾಪಿಕ್ ಸಮಸ್ಯೆಯ ಬಗ್ಗೆ ಅನೇಕ ದೂರುಗಳು ಕೇಳಿಬಂದವು. ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಿಂದ, ಡಿ.ಸಿ.ಸಿ ಬ್ಯಾಂಕ್ ತನಕ ರಸ್ತೆ ಬದಿಯಲ್ಲಿ ಸೋಮವಾರ ಸಂತೆ ದಿನ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ಆಟೋ ಚಾಲಕರ ಸಂಘದ ಅಧ್ಯಕ್ಷ ಎಚ್.ಕೆ. ಗಂಗಾಧರ ಹೇಳಿದರು.

ಕೊಡವ ಸಮಾಜದ ರಸ್ತೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ತೆರಳುವುದರಿಂದ ಈ ಹಿಂದೆ ವಾಹನಗಳ ಓಡಾಟಕ್ಕೆ ಅವಕಾಶವಿರಲಿಲ್ಲ. ಆದರೆ ಈಗ ಬೈಕ್‌ಗಳ ಓಡಾಟ ಪ್ರಾರಂಭವಾಗಿದೆ. ಅದರಲ್ಲು ಶಾಲಾ ಮಕ್ಕಳು ತೆರಳುವ ಸಂದರ್ಭದಲ್ಲೇ ಅತೀವೇಗದಲ್ಲಿ ಬೈಕ್‌ಗಳು ಸಂಚರಿಸುತ್ತವೆ. ಆ ರಸ್ತೆಯಲ್ಲಿ ಬೈಕ್‌ಗಳ ಓಡಾಟಕ್ಕೂ ಅವಕಾಶ ಮಾಡಿಕೊಡಬಾರದು ಎಂದು ಜನಾರ್ಧನ್, ಕೆ.ಪಿ.ರವೀಶ್ ಹೇಳಿದರು.

ಓಮಿನಿ ವ್ಯಾನ್‌ಗಳಲ್ಲಿ ಬಾಡಿಗೆ ಮಾಡುತ್ತಿರುವುದರಿಂದ ಆಟೋ ಚಾಲಕರಿಗೆ ಬಾಡಿಗೆ ಇಲ್ಲದಂತಾಗಿದೆ. ಬಾಡಿಗೆ ಮಾಡುತ್ತಿರುವ ಓಮಿನಿ ವ್ಯಾನ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಟೋ ಚಾಲಕರು ಹೇಳಿದರು.

ಮಡಿಕೇರಿ ರಸ್ತೆಯ ವಿವೇಕಾನಂದ ಸರ್ಕಲ್‌ನ ಸನಿಹ ರಸ್ತೆ ಬದಿಯಲ್ಲಿ ಸೋಮವಾರ ಬೆಸ್ತರು ಮೀನುಗಳನ್ನು ಮಾರುವುದರಿಂದ ವಾಹನಗಳು ಹೆದ್ದಾರಿಯಲ್ಲೇ ನಿಂತಿರುತ್ತದೆ. ಇದರಿಂದ ಇತರ ವಾಹನ ಚಾಲಕರಿಗೆ ಕಿರಿಕಿರಿ ಆಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ತೆರಳಲು ಸಮಸ್ಯೆಯಾಗುತ್ತಿದೆ ಎಂದು ದೂರಿದರು.

ಟ್ರಾಫಿಕ್ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರ ಆಹವಾಲನ್ನು ಪರಿಶೀಲಿಸಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದು ಪಿಎಸ್‌ಐ ಗಳಾದ ವಿರೂಪಾಕ್ಷ, ಕಾಶೀನಾಥ್ ಬಗಲಿ ಹೇಳಿದರು.