ಸೋಮವಾರಪೇಟೆ,ಮೇ ೧೩: ಸಮೀಪದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯಡವಾರೆ-ಸಜ್ಜಳ್ಳಿ ಗ್ರಾಮ ನಿವಾಸಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾಲು (೩೫) ಅವರು ನಿಧನರಾದರು.
ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಂದು ಸಂಜೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದ ಡಾಲು ಅವರು ರಜೆಯ ನಿಮಿತ್ತ ಕಳೆದ ತಾ. ೧೦ರಂದು ಸ್ವಗ್ರಾಮಕ್ಕೆ ಬಂದಿದ್ದರು. ತಾ. ೧೨ ರಂದು ಸೋಮವಾರಪೇಟೆ ಪಟ್ಟಣಕ್ಕೆ ಆಗಮಿಸಿ ಮಧ್ಯಾಹ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಎದುರು ಭಾಗದಿಂದ ಆಗಮಿಸಿದ ದ್ವಿಚಕ್ರ ವಾಹನ ಡಿಕ್ಕಿಯಾಗಿದ್ದು, ಗಂಭೀರ ಗಾಯಗೊಂಡಿದ್ದರು.
ತಕ್ಷಣ ಆಂಬ್ಯುಲೆನ್ಸ್ ಮೂಲಕ ಮೈಸೂರಿಗೆ ಸಾಗಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಮೃತ ಡಾಲು ಅವರು ಪತ್ನಿ ಸೇರಿದಂತೆ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.