ಗೋಣಿಕೊಪ್ಪಲು, ಮೇ ೧೩: ಕಳೆದ ರಾತ್ರಿ ಸುರಿದ ಭಾರೀ ಮಳೆ ಹಾಗೂ ಚಳಿಗೆ ಸಿಲುಕಿದ ಪ್ರತಿಭಟನಾಕಾರರಲ್ಲಿ ಹಲವು ಮಂದಿ ಅಸ್ವಸ್ಥಗೊಂಡಿದ್ದು ಹಾಡಿಯ ಪ್ರಮುಖರಾದ ಜೇನುಕುರುಬರ ಸಣ್ಣಯ್ಯ ಶುಕ್ರವಾರ ಮುಂಜಾನೆ ವೇಳೆ ಸ್ಥಳದಲ್ಲಿ ಕುಸಿದು ಬಿದ್ದ ಕಾರಣ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬ್ಯುಲೆನ್ಸ್ ಮೂಲಕ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ವಿಪರೀತ ಮಳೆ ಸುರಿಯುತ್ತಿದ್ದರೂ ಇದನ್ನು ಲೆಕ್ಕಿಸದೆ ತಮ್ಮ ಹಕ್ಕುಗಳನ್ನು ಪಡೆದೆ ತೀರುವ ನಿಟ್ಟಿನಲ್ಲಿ ಹೆಚ್.ಡಿ. ಕೋಟೆ ತಾಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರದಿAದ ಆಗಮಿಸಿರುವ ೬೦ಕ್ಕೂ ಅಧಿಕ ಕುಟುಂಬಗಳು ಬಾಳೆಲೆ ಹೋಬಳಿಯ ರಾಜಪುರ ಸಮೀಪದ ಅಡುಗುಂಡಿ ಅರಣ್ಯ ವ್ಯಾಪ್ತಿಯಲ್ಲಿ ಪ್ರತಿಭಟನೆ ಆರಂಭಿಸಿವೆ. ಪ್ರತಿಭಟನೆಯು ೫ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾ ಸ್ಥಳಕ್ಕೆ ಪ್ರತಿನಿತ್ಯ ಹಲವು ಸಂಘ ಸಂಸ್ಥೆಯ ಪ್ರಮುಖರು ಹಾಗೂ ರಾಜಕೀಯ ಮುಖಂಡರುಗಳು ಭೇಟಿ ನೀಡಿ ಹೋರಾಟಗಾರರಿಗೆ ಬೆಂಬಲ ನೀಡುತ್ತಿದ್ದಾರೆ. ವಿಪರೀತ ಗಾಳಿ ಹಾಗೂ ಚಳಿಯನ್ನು ಲೆಕ್ಕಿಸದೆ ಕೇವಲ ಪ್ಲಾಸ್ಟಿಕ್ ಹೊದಿಕೆಯ ಆಶ್ರಯ ಪಡೆದು ಅಹೋರಾತ್ರಿ ಪ್ರತಿಭಟನೆಗೆ ಕುಳಿತ ಸ್ಥಳದಲ್ಲಿ ಮಳೆಯಿಂದ ನೀರು ನುಗ್ಗುತ್ತಿದೆ. ಇದರಿಂದ ಪ್ಲಾಸ್ಟಿಕ್ ಹೊದಿಕೆಯ ಕೆಳಗೆ ಕುಳಿತಿರುವ ಬಾಣಂತಿಯರು ಹಾಗೂ ಮಹಿಳೆಯರಿಗೆ ಹೆಚ್ಚಾಗಿ ತೊಂದರೆ ಕಾಣಿಸಿಕೊಳ್ಳುತ್ತಿದೆ.
ಪ್ರತಿಭಟನಾ ಸ್ಥಳಕ್ಕೆ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಇಲ್ಲಿಯ ತನಕ ಆಗಮಿಸದಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದ್ದಾರೆ. ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತಕ್ಕೆ ಆದಿವಾಸಿಗಳ ಮೇಲೆ ಕರುಣೆ ಇಲ್ಲದಂತಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಮಾಸ್ತಿಗುಡಿ ಪುರ್ನವಸತಿ ಕೇಂದ್ರದಲ್ಲಿ ಭೂಮಿಯ ಸಮತಟ್ಟು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ಬದುಕು ಅತಂತ್ರವಾಗಿದೆ. ಆದ್ದರಿಂದ ಅನಿವಾರ್ಯವಾಗಿ ಅಹೋರಾತ್ರಿ ಪ್ರತಿಭಟನೆಗೆ ತೀರ್ಮಾನ ಕೈಗೊಳ್ಳಬೇಕಾಯಿತು ಎಂದು ಹೋರಾಟದ ಮುಂಚೂಣಿ ನಾಯಕ ಜೇನುಕುರುಬರ ಅಯ್ಯಪ್ಪ ತಿಳಿಸಿದರು. ಮೈಸೂರಿನ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಬೇಕು ಎಂದು ಆಗ್ರಹಿಸಿದರು.
ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪ್ರ. ಕಾರ್ಯದರ್ಶಿ ಸುಜಯ್ ಬೋಪಯ್ಯ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೇಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮಾಚಯ್ಯ, ಲೆಹರ್ ಬಿದ್ದಪ್ಪ, ಮಾಯಮುಡಿಯ ಪುಚ್ಚಿಮಾಡ ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಗಾಣಂಗಡ ಉತ್ತಯ್ಯ, ಅರಮಣಮಾಡ ಕುಶ, ಪೆಮ್ಮಂಡ ಉಮೇಶ್, ಮುದ್ದಿಯಡ ದಿನು, ಹೆಚ್.ಸಿ.ರಾಜು ಸೇರಿದಂತೆ ಇನ್ನಿತರ ಪದಾಧಿಕಾರಿಗಳು ತೆರಳಿ ಬೆಂಬಲ ವ್ಯಕ್ತಪಡಿಸಿದರು. ಸ್ಥಳದಿಂದ ಮೈಸೂರು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಜಿಲ್ಲಾಧ್ಯಕ್ಷ ಮನುಸೋಮಯ್ಯ ಆದಿವಾಸಿಗಳ ಸಮಸ್ಯೆಗೆ ಸ್ಪಂದಿಸುವAತೆ ಮನವಿ ಮಾಡಿದರು. ಸ್ಥಳಕ್ಕೆ ಇಲಾಖಾಧಿಕಾರಿಗಳನ್ನು ಕಳುಹಿಸಿ ಆದಿವಾಸಿಗಳ ಭೇಡಿಕೆಗೆ ಸ್ಪಂದಿಸುವAತೆ ಮನವಿ ಮಾಡಿದರು. ಈ ವೇಳೆ ಮೈಸೂರಿನ ಜಿಲ್ಲಾಧಿಕಾರಿಗಳು ದೂರವಾಣಿ ಕರೆಗೆ ಸ್ಪಂದಿಸಿ ಕೊಡಗು ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಮಾತನಾಡುವುದಾಗಿ ಹಾಗೂ ಹೋರಾಟಗಾರರು ಕೇಳುತ್ತಿರುವ ಆರ್ಟಿಸಿಯನ್ನು ಮಾಡಿಕೊಡಲು ಎ.ಸಿ.ಯವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆದಷ್ಟು ಬೇಗನೇ ಎಲ್ಲಾ ಕುಟುಂಬಗಳಿಗೆ ಆರ್ಟಿಸಿ ಒದಗಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು. ಈ ವೇಳೆ ರೈತ ಸಂಘದಿAದ ಆದಿವಾಸಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದರು.
-ಹೆಚ್.ಕೆ.ಜಗದೀಶ್