ಮಡಿಕೇರಿ, ಮೇ ೧೨: ಸರಕಾರಿ ಭೂಮಿಯನ್ನು ತೋಟವನ್ನಾಗಿ ಪರಿವರ್ತಿಸಿದ ಜಾಗವನ್ನು ಷರತ್ತುಬದ್ಧ ವಿನಾಯಿತಿಗಳೊಂದಿಗೆ ಗುತ್ತಿಗೆಗೆ ನೀಡಲಾಗುವುದು. ಅಗತ್ಯ ಬಿದ್ದರೆ ನೀಡಿದ ಜಾಗವನ್ನು ಹಿಂಪಡೆದು ಕೊಳ್ಳಲಾಗುವುದು. ಅಭಿವೃದ್ಧಿ ಕಾರ್ಯಕ್ಕೆ ಗುರುತಿಸಿದ ಜಾಗವನ್ನು ಗುತ್ತಿಗೆಗೆ ನೀಡುವುದಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದರು.

ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಡೆದ ರೈತ ಸಮಾವೇಶ ವನ್ನು ಅಡಿಕೆ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೧ ರಿಂದ ೩ ಎಕರೆ ಜಾಗದಂತೆ ೭೩೭೪ ಮಂದಿ, ಒಟ್ಟು ೧೦,೮೮೦ ಎಕರೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ೩ ರಿಂದ ೫ ಎಕರೆ ಜಾಗವನ್ನು ೧೯೧೦ ಜನ, ಒಟ್ಟು ೮೧೪೯ ಎಕರೆ ಒತ್ತುವರಿಗೊಳಿಸಿ ಕೊಂಡಿದ್ದಾರೆ. ೫ ರಿಂದ ೧೦ ಎಕರೆ ಜಾಗವನ್ನು ೪೧೫ ಮಂದಿ, ೧೦ ರಿಂದ ೧೫ ಎಕರೆ ಜಾಗವನ್ನು ೫೮ ಜನ ಒತ್ತುವರಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಪೈಸಾರಿ ಜಾಗವನ್ನು ತೋಟವನ್ನಾಗಿ ಪರಿವರ್ತಿ ಸಿರುವುದನ್ನು ನಿಯಮನುಸಾರ ಗುತ್ತಿಗೆ ನೀಡುವ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖಗೊಂಡಿದೆ. ಆದರೆ, ಇದು ಇನ್ನೂ ಅನುಷ್ಠಾನವಾಗಿಲ್ಲ. ಚರ್ಚೆಯ ಹಂತದಲ್ಲಿದೆ. ರೈತರ ಸಲಹೆಗಳನ್ನು ಪಡೆದು ವೈಜ್ಞಾನಿಕ ರೀತಿಯಲ್ಲಿ

(ಮೊದಲ ಪುಟದಿಂದ) ಭೂ ಕಾಯಿದೆಯನ್ನು ತಿದ್ದುಪಡಿಗೊಳಿಸಿ ಜಾರಿಗೊಳಿಸ ಲಾಗುವುದು ಎಂದರು.

ನಿಗದಿತ ವರ್ಷಕ್ಕಿಂತ ಮುಂಚೆ ತೋಟವನ್ನಾಗಿ ಮಾಡಿದವರಿಗೆ ಮಾತ್ರ ಗುತ್ತಿಗೆ ನೀಡಲಾಗುವುದು. ಜಾಗ ಒತ್ತುವರಿ ಮಾಡಿಕೊಂಡು ತೋಟ ಮಾಡಿದವರ ಮೇಲೆ ೧೯೨ಎ ಅಡಿ ಇರುವ ವ್ಯಾಜ್ಯ ಈ ನಿಯಮ ಜಾರಿಯಾದ ಬಳಿಕ ವಜಾವಾಗಲಿದೆ. ಒತ್ತುವರಿ ಜಾಗದಲ್ಲಿ ವಾಣಿಜ್ಯ ಉದ್ದೇಶದಿಂದ ಬಳಕೆ ಮಾಡುತ್ತಿದ್ದರೆ ೧೯೨ಎ ಅಡಿಯಲ್ಲಿ ನಡೆಯುತ್ತಿರುವ ವ್ಯಾಜ್ಯ ಮುಂದುವರೆಯಲಿದೆ. ಕೃಷಿ ಮಾಡುತ್ತಿದ್ದರೆ ಮಾತ್ರ ವ್ಯಾಜ್ಯಗಳು ವಜಾವಾಗಲಿದೆ. ಗುತ್ತಿಗೆ ನೀಡಿದರೆ ತೋಟಗಳು ಸಕ್ರಮವಾಗಿ ಸಹಜವಾಗಿ ಮಾರ್ಪಡುತ್ತವೆ. ಈ ಯೋಜನೆಯಿಂದ ಬಹುತೇಕ ಸಣ್ಣ ಹಿಡುವಳಿದಾರರಿಗೆ ಪ್ರಯೋಜನ ವಾಗಲಿದೆ. ಒತ್ತುವರಿಯ ವಿಸ್ತೀರ್ಣ ಆಧಾರದಲ್ಲಿ ಗುತ್ತಿಗೆಗೆ ದರ ನಿಗದಿಗೊಳಿಸಲಾಗುವುದು. ಎಲ್ಲದಕ್ಕೂ ಮಾನದಂಡ ರೂಪಿಸಿ ಯಾರಿಗೂ ಸಮಸ್ಯೆ, ಮುಂದೆ ತಾಂತ್ರಿಕ ತೊಂದರೆಗಳು ಎದುರಾಗದಂತೆ ಎಚ್ಚರಿಕೆ ವಹಿಸಿ ವೈಜ್ಞಾನಿಕ ರೀತಿಯಲ್ಲಿ ನಿಯಮ ಜಾರಿಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭೂರಹಿತರಿಗೆ ನಿವೇಶನ ನೀಡುವ ಸಂಬAಧ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಈಗಾಗಲೇ ಗುರುತಿಸಿರುವ ಜಾಗವನ್ನು ಗುತ್ತಿಗೆಗೆ ನೀಡುವುದಿಲ್ಲ. ಅಗತ್ಯವಿದ್ದರೆ ಜಾಗವನ್ನು ಹಿಂಪಡೆಯಲು ಕಾಯಿದೆಯಲ್ಲಿ ಅವಕಾಶ ಇರಲಿದೆ ಎಂದು ವಿವರಿಸಿದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ. ಪೈಸಾರಿ ಜಾಗದಲ್ಲಿ ಅನೇಕ ವರ್ಷಗಳಿಂದ ತೋಟ ಮಾಡಿಕೊಂಡವರಿಗೆ ತಾಂತ್ರಿಕ ಕಾರಣದಿಂದ ಅಕ್ರಮ ಸಕ್ರಮದಡಿ ಅರ್ಜಿ ಸ್ವೀಕೃತವಾಗಿಲ್ಲ. ಕಾಫಿ ವಾಣಿಜ್ಯ ಹಾಗೂ ವಿದೇಶಿ ವಿನಿಮಯದ ಬೆಳೆಯಾಗಿರುವ ಹಿನ್ನೆಲೆ ಕಾಫಿ ಬೆಳೆ ಉತ್ತೇಜಿಸುವ ನಿಟ್ಟಿನಲ್ಲಿಯೂ ಈ ನಿಯಮ ಸಹಕಾರಿಯಾಗಲಿದೆ. ಫಾರಂ ೫೭ ಮೂಲಕ ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಲು ಅವಕಾಶವಿದ್ದರೂ ಅಧಿಕಾರಿಗಳು ಅರ್ಜಿ ವಜಾಗೊಳಿಸಿ ಬೆಳೆಗಾರರಿಗೆ ಸಮಸ್ಯೆ ನೀಡುತ್ತಿದ್ದಾರೆ. ಇದರಿಂದ ಸಣ್ಣ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಾವಿರಾರು ಕಡತಗಳು ಬಾಕಿ ಉಳಿದಿವೆ. ಜಿಲ್ಲೆಯಲ್ಲಿರುವ ನಿವೇಶನ ರಹಿತರಿಗೆ ಸಿ & ಡಿ ಲ್ಯಾಂಡ್ ಜಾಗವನ್ನು ನೀಡಲು ಉದ್ದೇಶಿಸಲಾಗಿದೆ. ಪಟ್ಟೇದಾರ ಹಾಗೂ ಪೌತಿ ಖಾತೆ ವರ್ಗಾವಣೆ ಕೊಡಗಿನ ಮೂಲ ಸಮಸ್ಯೆಗಳಲ್ಲಿ ಒಂದಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಹಿಂದೂ ಕಾನೂನಿನಡಿ ವಿಂಗಡಿಸಿ ವೈಯಕ್ತಿಕ ಆರ್.ಟಿ.ಸಿ. ನೀಡಲು ಅವಕಾಶವಿದೆ. ಈ ಬಗ್ಗೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೇರಳ ಮಾದರಿಯಲ್ಲಿ ನಿಯಮ ರೂಪಿಸಲು ಒತ್ತಡ ತಂದ ಹಿನ್ನೆಲೆ ಕಾಯಿದೆ ತಿದ್ದುಪಡಿಗೆ ಸರಕಾರ ಮುಂದಾಗಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ ಸರ್ವೇಯರ್‌ಗಳ ಕೊರತೆ ಇದ್ದು, ಈ ಬಗ್ಗೆ ಕ್ರಮವಹಿಸಲಾಗುವುದು. ಹೆಚ್ಚುವರಿಯಾಗಿ ಉಪ ವಿಭಾಗಧಿಕಾರಿಗಳನ್ನು ಪೋಡಿ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ನೇಮಿಸಬೇಕು ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಹಾಜರಿದ್ದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಡೇಗೌಡ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.