ಸಮಾರೋಪ ಸಮಾರಂಭ
ನಾಪೋಕ್ಲು, ಮೇ ೧೨: ಬೇಸಿಗೆ ತರಬೇತಿ ಶಿಬಿರದ ಮೂಲಕ ಮಕ್ಕಳ ಪ್ರತಿಭೆಯನ್ನು ಹೊರತರುವ ಕೆಲಸವನ್ನು ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿ ಮಾಡುತ್ತಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಹೇಳಿದರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅಕಾಡೆಮಿ ವತಿಯಿಂದ ಇಲ್ಲಿನ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಹಿಂದೆ ರಜಾ ಅವಧಿಯಲ್ಲಿ ಮಕ್ಕಳು ಬಂಧು ಬಳಗದವರ ಮನೆಗೆ ತೆರಳಿ, ದೈಹಿಕ ಮಾನಸಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈಗ ಮೊಬೈಲ್ ಟಿ.ವಿ. ಬಳಕೆಯಿಂದಾಗಿ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಂಠಿತಗೊಳ್ಳುತ್ತಿದ್ದಾರೆ. ಮಕ್ಕಳ ಸಾಮರ್ಥ್ಯವನ್ನು ವೃದ್ಧಿಸಲು ಶಿಬಿರಗಳು ಸಹಕಾರಿ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಅವನಿಜ ಸೋಮಯ್ಯ ಮಾತನಾಡಿ, ಪ್ರೌಢಶಾಲಾ ಹಂತದಲ್ಲಿ ಶಿಕ್ಷಣ ಇಲಾಖೆಯಿಂದ ಕ್ರೀಡಾ ಸಾಮಗ್ರಿಗಳನ್ನು ಒದಗಿಸಿದರೂ ಅವುಗಳನ್ನು ವ್ಯವಸ್ಥಿತವಾಗಿ ಬಳಸಲು ದೈಹಿಕ ಶಿಕ್ಷಕರ ಕೊರತೆ ಇದೆ. ಉತ್ತಮ ತರಬೇತುದಾರರು ಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರೋತ್ಸಾಹ ಕೊಡಬೇಕು ಎಂದರು.
ಕಾಂಡAಡ ಜೋಯಪ್ಪ ಮಾತನಾಡಿ, ಹಾಕಿ ರಾಷ್ಟಿçÃಯ ಕ್ರೀಡೆಯಾಗಿದ್ದು, ಅಕಾಡೆಮಿ ಆಯೋಜಿಸುತ್ತಿರುವ ಹಾಕಿ ತರಬೇತಿ ಶಿಬಿರದಲ್ಲಿ ಕಾಲಕಾಲಕ್ಕೆ ಬದಲಾಗುವ ಹಾಕಿಯ ನಿಯಮಗಳನ್ನು, ತಂತ್ರಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿಕೊಡುವ ಕೆಲಸವಾಗಬೇಕು ಎಂದರು.
ಅಕಾಡೆಮಿಯ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ಮಾತನಾಡಿ, ೨೨ ವರ್ಷಗಳಿಂದ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದ್ದು ಶಿಬಿರದಲ್ಲಿ ಮಕ್ಕಳಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ತರಬೇತಿ ನೀಡಲಾಗುತ್ತಿದೆ. ಅಕಾಡೆಮಿ ವತಿಯಿಂದ ಶಿಬಿರಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ಮಾತ್ರವಲ್ಲದೆ ಬಾಳೆ ಹಣ್ಣು, ಹಾಲು, ಮೊಟ್ಟೆ, ಬಿಸ್ಕೆಟ್ ಸೇರಿದಂತೆ ಲಘು ಉಪಹಾರವನ್ನು ನೀಡಲು ದಾನಿಗಳು ಸಹಕರಿಸುತ್ತಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಮಾಚೆಟ್ಟೀರ ಕುಶು ಕುಶಾಲಪ್ಪ, ಶಿಬಿರಕ್ಕೆ ಸಹಕರಿಸಿದ ದಾನಿಗಳ ಮಾಹಿತಿಯನ್ನು ಸಭೆಗೆ ತಿಳಿಸಿದರು. ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸುವುದರ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ. ಅಕಾಡೆಮಿ ಸ್ಥಾಪಕ ಕಲಿಯಂಡ ಅಯ್ಯಣ್ಣ ಅವರ ನಿಸ್ವಾರ್ಥ ಸೇವೆ ಸ್ಮರಣೀಯ ಎಂದರು.
ವೇದಿಕೆಯಲ್ಲಿ ಅಕಾಡೆಮಿ ಉಪಾಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ, ನಿರ್ದೇಶಕರಾದ ಮುಂಡAಡ ಕವಿತ, ಬಿದ್ದಾಟಂಡ ಮಮತ, ಇಂದಿರಾ ಅಯ್ಯಣ್ಣ, ದುಗ್ಗಳ ಸದಾನಂದ, ತರಬೇತುದಾರರಾದ ಕೇಟೋಳಿರ ಡಾಲಿ ಅಚ್ಚಪ್ಪ, ಅರೆಯಡ ಗಣೇಶ್ ಹಾಗೂ ಪೋಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಣವಟ್ಟೀರ ದೊರೆ ಸೋಮಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಮುಕ್ಕಾಟಿರ ವಿನಯ್ ಅಕಾಡೆಮಿಗೆ ರೂ. ೫,೦೦೦ ಸಹಾಯಧನ ನೀಡಿದರು. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿ ಗಳಿಗೆ ವೇದಿಕೆಯಲ್ಲಿದ್ದ ಅತಿಥಿಗಳು ಅರ್ಹತಾ ಪತ್ರ ವಿತರಿಸಿದರು. ಶಿಬಿರಾರ್ಥಿ ಮಾನಸ, ವಿಪೂಲï, ತನ್ವಿ ತಂಡ ಪ್ರಾರ್ಥಿಸಿದರು. ರೋಹನ್ ಮಾಚಯ್ಯ ಸ್ವಾಗತಿಸಿದರು. ರೋನಿಕಾ ರೈ ವರದಿ ವಾಚಿಸಿದರು. ಸೋಮಣ್ಣ ವಂದಿಸಿದರು.