ಮಡಿಕೇರಿ ಮೇ ೧೧ : ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡುವಿ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೀಮಿತವಾದ ೨ ಎಕರೆ ಸ್ಮಶಾನ ಜಾಗವನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಒಂದು ವೇಳೆ ಕ್ರಿಕೆಟ್ ಸಂಸ್ಥೆಗೆ ನೀಡಿದ್ದೇ ಆದಲ್ಲಿ ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಬಹುಜನ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ ಹೇಳಿದ್ದಾರೆ.

ಪಾಲೆಮಾಡುವಿನಲ್ಲಿ ಕಳೆದ ೩ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ೧೫ ವರ್ಷಗಳಿಂದ ಪಾಲೇಮಾಡು ನಿವಾಸಿಗಳ ಸ್ವಾಧೀನದಲ್ಲಿರುವ ಸ್ಮಶಾನದ ಜಾಗವನ್ನು ಜಿಲ್ಲಾಡಳಿತ ಏಕಾಏಕಿ ಕ್ರಿಕೆಟ್ ಸಂಸ್ಥೆಗೆ ನೀಡುವ ಮೂಲಕ ಬಡವರ ಆಸ್ತಿಯನ್ನು ಕಿತ್ತುಕೊಂಡಿದೆ. ಜೆಸಿಬಿ ಯಂತ್ರವನ್ನು ಬಳಸಿ ಸ್ಮಶಾನವನ್ನು ನಾಶ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.

೨೦೦೯ರಲ್ಲಿ ಹೊದ್ದೂರು ಪಾಲೇಮಾಡು ಕಾನ್ಶಿರಾಂ ನಗರದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಮಂಜೂರಾದ ೨ ಎಕರೆ ಸ್ಮಶಾನ ಜಾಗವನ್ನು ತಕ್ಷಣ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಅಧಿಕಾರಿಗಳ ನಡೆ ಖಂಡನೀಯವೆAದು ಅಸಮಾಧಾನ ವ್ಯಕ್ತಪಡಿಸಿದರು.

ಹೊದ್ದೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾವತಿ ಮಾತನಾಡಿ ಸ್ಮಶಾನದ ಜಾಗಕ್ಕಾಗಿ ನ್ಯಾಯಯುತ ಹೋರಾಟ ನಡೆಸಿದ ನಮ್ಮನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಹುಜನ ಕಾರ್ಮಿಕರ ಸಂಘದ ಪ್ರಮುಖರು ಈ ಸಂದರ್ಭ ಹಾಜರಿದ್ದರು. ಸ್ಥಳೀಯ ನಿವಾಸಿಗಳ ಪ್ರತಿಭಟನೆ ಮುಂದುವರೆದಿದೆ.