ಮಡಿಕೇರಿ, ಮೇ ೧೨: ಕೋವಿಡ್‌ನಿಂದ ಸಾವನ್ನಪ್ಪಿದವರ ಅಂಕಿ ಅಂಶದಲ್ಲಿ ರಾಜ್ಯ ಸರಕಾರ ನೀಡಿದ ವರದಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಸರಕಾರ ಕೋವಿಡ್ ಸಂತ್ರಸ್ತರಿಗೆ ನೆರವು ನೀಡುವಲ್ಲಿ ವಿಫಲವಾಗಿದೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ೪.೭ ಲಕ್ಷ ಎಂದು ರಾಜ್ಯ ಸರಕಾರ ಹೇಳಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಮೃತಪಟ್ಟವರ ಸಂಖ್ಯೆ ೪೭ ಲಕ್ಷ ಎಂದು ವರದಿ ನೀಡಿದೆ. ಜನರ ಹಣ ಲೂಟಿ ಮಾಡುತ್ತ ೪೦% ಸರಕಾರ ಎಂದು ಕರೆಸಿಕೊಳ್ಳುವ ರಾಜ್ಯ ಸರಕಾರ ಜನರ ನೋವಿಗೆ ಸ್ಪಂದಿಸುತ್ತಿಲ್ಲ. ಪರಿಹಾರ ನೀಡಬೇಕಾಗುತ್ತದೆ ಎಂಬ ಉದ್ದೇಶದಿಂದ ಮೃತಪಟ್ಟವರ ಅಂಕಿ ಅಂಶವನ್ನು ತಿರುಚುವ ಕೆಲಸವನ್ನು ಸರಕಾರ ಮಾಡಿದೆ. ಸಾಂತ್ವನ ಹೇಳುವ ಬದಲು ಸಮಾಜವನ್ನು ಒಡೆಯುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ನಿರುದ್ಯೋಗದಿಂದ ಉಡುಪಿಯ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ೨ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಪ್ರಧಾನಿ ಮೋದಿ ಭರವಸೆ ಹುಸಿಯಾಗಿದೆೆ. ಕೋವಿಡ್‌ನಿಂದ ಚೇತರಿಕೆ ಕಾಣುವ ಹೊತ್ತಿನಲ್ಲಿ ೪ನೇ ಅಲೆ ಆಗಮನ ಎನ್ನುತ್ತಾರೆ. ಹಣ ಮಾಡಲು ಈ ಸರಕಾರ ೪ ಅಲ್ಲ ೬ ಅಲೆ ಬೇಕಾದರು ಸೃಷ್ಟಿ ಮಾಡುತ್ತದೆ ಎಂದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ ಮಾತನಾಡಿ, ಜಿಲ್ಲೆಯ ಶಾಸಕರುಗಳು ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ. ಅಮಾನತ್ತು ಮಾಡಿದ ಅಧಿಕಾರಿಯನ್ನು ಮತ್ತೇ ಅಧಿಕಾರ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನೀಫ್, ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಿರಾಜ್, ಮುಖಂಡ ಅಶ್ರಫ್ ಹಾಜರಿದ್ದರು.