ಮಡಿಕೇರಿ, ಮೇ ೧೧: ಬೆಳೆಗಾರರು ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ೩೦ ವರ್ಷಗಳವರೆಗೆ ಗುತ್ತಿಗೆ ಆಧಾರದಲ್ಲಿ ನೀಡುವ ಸರಕಾರದ ನಿರ್ಧಾರ ಸ್ವಾಗತಾರ್ಹ. ಇದೇ ಮಾದರಿಯಲ್ಲಿ ಕಡುಬಡವರು, ಕೂಲಿ ಕಾರ್ಮಿಕರು ಹಾಗೂ ಗಿರಿಜನರು ಸೂರಿಗಾಗಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕೆಂದು ಮಡಿಕೇರಿ ನಗರ ಕಾಂಗ್ರೆಸ್ ನ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಡವರು ಆಶ್ರಯ ಪಡೆದುಕೊಳ್ಳಲು ೨- ೩ ಸೆಂಟ್ ನಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಬೆಳೆಗಾರರ ಬಗ್ಗೆ ಹೆಚ್ಚು ಆಸಕ್ತಿ ತೋರಿರುವ ಸರಕಾರ ಬಡವರಿಗೂ ನಿವೇಶನವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿರುವ ಸಾವಿರಾರು ವಸತಿ ರಹಿತ ಬಡ ಕುಟುಂಬಗಳು ಸರಕಾರದ ಸೂರಿಗಾಗಿ ಕಾದು ಬೇಸತ್ತಿವೆ. ಯಾವುದೇ ವಸತಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇದೇ ಕಾರಣದಿಂದ ಬಡವರು ಹಾಗೂ ಕೂಲಿ ಕಾರ್ಮಿಕರು ಪೈಸಾರಿ ಜಾಗಗಳನ್ನು ಒತ್ತುವರಿ ಮಾಡಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿದ್ದರೂ ಜಾಗವನ್ನು ಸರಕಾರ ಸಕ್ರಮಗೊಳಿಸಿಲ್ಲ. ಆದಿವಾಸಿ ಅರಣ್ಯಹಕ್ಕು ಮಸೂದೆ ಜಾರಿಯಾಗಿ ೧೫ ವರ್ಷಗಳೇ ಕಳೆದಿದ್ದರೂ ಗಿರಿಜನರಿಗೆ ಮಸೂದೆಯಲ್ಲಿ ಸೂಚಿಸಿರುವಷ್ಟು ಭೂಮಿಯನ್ನು ಇಲ್ಲಿಯವರೆಗೆ ನೀಡಿಲ್ಲ ಎಂದಿದ್ದಾರೆ.

ಕAದಾಯ ಸಚಿವರು ಕೊಡಗು ಜಿಲ್ಲೆಗೆ ಆಗಮಿಸಿದಾಗ ಬಡವರಿಗೆ ನಿವೇಶನ ಹಂಚಿಕೆ ಮಾಡುವ ಬಗ್ಗೆಯೂ ಚರ್ಚೆ ನಡೆಸಬೇಕು. ಜಿಲ್ಲೆಯಲ್ಲಿರುವ ಪೈಸಾರಿ ಜಾಗಗಳನ್ನು ಸರ್ವೆ ಮಾಡಿ ಬಡವರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಒತ್ತುವರಿ ಜಮೀನನ್ನು ೩೦ ವರ್ಷಗಳಿಗೆ ಗುತ್ತಿಗೆ ನೀಡುವ ಸಂದರ್ಭ ನಿಯಮ ದುರುಪಯೋಗವಾಗುವ ಸಾಧ್ಯತೆಗಳಿರುವುದರಿಂದ ಸರಕಾರ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಕೆ.ಜಿ.ಪೀಟರ್ ಆಗ್ರಹಿಸಿದ್ದಾರೆ.