ಗೋಣಿಕೊಪ್ಪ ವರದಿ, ಮೇ ೧೧: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಲೀಗ್ ಟೂರ್ನಿಯಲ್ಲಿ೭ ತಂಡಗಳು ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದಿದ್ದು, ಶುಕ್ರವಾರ ಮುಂದಿನ ಪಂದ್ಯಗಳು ನಡೆಯಲಿವೆ.

ಪ್ರೀ ಕ್ವಾರ್ಟರ್ ಪಂದ್ಯಗಳಲ್ಲಿ ಬ್ಲೇಜ್, ಮಡಿಕೇರಿ ಚಾರ್ಮರ್ಸ್, ಕೋಣನಕಟ್ಟೆ, ಶಿವಾಜಿ (ಎ), ಪೊದ್ದಮಾನಿ, ಬ್ಲೂಸ್ಟಾರ್ ಸೋಮವಾರಪೇಟೆ ಹಾಗೂ ಬೇಗೂರು ಈಶ್ವರ ಕ್ಲಬ್ ತಂಡಗಳು ಗೆಲುವಿನ ನಗೆ ಬೀರಿದವು. ನಾಲಡಿ, ಬಲಮುರಿ, ಡ್ರಿಬ್ರ‍್ಸ್, ಮಲೆನಾಡ್, ವೀರಾಜಪೇಟೆ ಕೊಡವ ಸಮಾಜ ಗೋಲು ದಾಖಲಿಸಲಾಗದೆ ಟೂರ್ನಿಯಿಂದ ಹೊರ ಬಿತ್ತು.

ಬ್ಲೇಜ್ ತಂಡ ಬಲಮುರಿ ವಿರುದ್ಧ ೨-೦ ಗೋಲುಗಳ ಗೆಲುವು ದಾಖಲಿಸಿತು. ೧೬ ನೇ ನಿಮಿಷದಲ್ಲಿ ನಾಣಯ್ಯ, ೩೪ ರಲ್ಲಿ ರಾಯಲ್ ಅಯ್ಯಣ್ಣ ಗೋಲು ಹೊಡೆದರು.

ಕೋಣನಕಟ್ಟೆ ತಂಡವು ನಾಲಡಿ ವಿರುದ್ದ ೨-೦ ಗೋಲುಗಳ ಭರ್ಜರಿ ಗೆಲುವು ದೊರೆಯಿತು. ೧೫ ನೇ ನಿಮಿಷದಲ್ಲಿ ಯಶ್ವಿನ್, ೧೪ ರಲ್ಲಿ ಅಯ್ಯಪ್ಪ ಗೋಲು ಬಾರಿಸಿದರು.

ಶಿವಾಜಿ (ಎ) ತಂಡವು ಡ್ರಿಬ್ರ‍್ಸ್ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು. ೨೯ ರಲ್ಲಿ ವಿಕಾಸ್, ೩೪ ರಲ್ಲಿ ನಿರನ್ ಗೋಲು ಹೊಡೆದರು.

ಪೊದ್ದಮಾನಿ ತಂಡಕ್ಕೆ ಹಾತೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ೨-೧ ಗೋಲುಗಳ ಜಯ ದೊರೆಯಿತು. ೩ ನೇ ನಿಮಿಷದಲ್ಲಿ ಪೊದ್ದಮಾನಿ ತಂಡದ ಶುಭಂ, ೨೩ ರಲ್ಲಿ ಚಂಗಪ್ಪ, ೩೪ ರಲ್ಲಿ ಹಾತೂರು ತಂಡದ ರೋಹನ್ ಗೋಲು ಬಾರಿಸಿದರು.

ಬ್ಲೂಸ್ಟಾರ್ ಸೋಮವಾರಪೇಟೆ ತಂಡವು ಮಲೆನಾಡ್ ವಿರುದ್ಧ ೨-೦ ಗೋಲುಗಳಿಂದ ಜಯಿಸಿತು. ೨೫ ಹಾಗೂ ೩೨ ನೇ ನಿಮಿಷಗಳಲ್ಲಿ ಶರತ್ ಎರಡು ಗೋಲು ಹೊಡೆದು ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.

ಬೇಗೂರು ತಂಡವು ವೀರಾಜಪೇಟೆ ಕೊಡವ ಸಮಾಜವನ್ನು ೩-೦ ಗೋಲುಗಳಿಂದ ಸೋಲಿಸಿತು. ೧ ನೇ ನಿಮಿಷದಲ್ಲಿ ದೀಪಕ್, ೧೯ ರಲ್ಲಿ ಎಂ. ಪಿ. ಕಾರ್ಯಪ್ಪ, ೩೯ ರಲ್ಲಿ ಎಂ. ಎಸ್. ಬೋಪಣ್ಣ ಗೋಲು ಹೊಡೆದು ಮಿಂಚಿದರು.

ಮಡಿಕೇರಿ ಚಾರ್ಮರ್ಸ್ ತಂಡವು ಯುಎಸ್‌ಸಿ ಬೇರಳಿನಾಡ್ ವಿರುದ್ಧ ಶೂಟೌಟ್‌ನಲ್ಲಿ ಗೆಲುವು ಪಡೆದುಕೊಂಡಿತು. ಉಭಯ ತಂಡಗಳು ನಿಗದಿತ ಸಮಯದಲ್ಲಿ ೨-೨ ಗೋಲುಗಳ ಡ್ರಾ ಸಾಧನೆ ಮಾಡಿದವು. ಶೂಟೌಟ್‌ನಲ್ಲಿ ಚಾರ್ಮರ್ಸ್ ೩ ಗೋಲು, ಬೇರಳಿನಾಡ್ ಗೋಲು ದಾಖಲಿಸ ಲಾಗದೆ ಸೋಲಿಗೆ ಶರಣಾಯಿತು. ೧೨ ನೇ ನಿಮಿಷದಲ್ಲಿ ಚಾರ್ಮರ್ಸ್ ಆಟಗಾರ ಅಶ್ವಿನ್ ಚರ್ಮಣ, ೩೩ ರಲ್ಲಿ ಸುಗಂಧ, ೩೦ ನೇ ನಿಮಿಷದಲ್ಲಿ ಬೇರಳಿನಾಡ್ ಆಟಗಾರ ಸಿ. ಆಕಾಶ್, ಉತ್ತಪ್ಪ ಗೋಲು ಹೊಡೆದರು.