ಗೋಣಿಕೊಪ್ಪಲು, ಮೇ ೧೦: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ವಿವಿಧ ಸರ್ಕಾರಗಳು, ರಾಜಕೀಯ ಪಕ್ಷಗಳು ಕೊಡಗಿನ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿವೆ, ಹೀಗಾಗಿ ಮುಂದೆ ಕೊಡಗಿನ ಜನತೆ ಜಾತಿ, ಧರ್ಮ, ಮತ ಬೇದ ಮರೆತು ರಾಜಕೀಯವಾಗಿ ಕೊಡಗು ಪ್ರತ್ಯೇಕ ರಾಜ್ಯಕ್ಕೆ ಹೋರಾಟ ನಡೆಸಬೇಕು, ಈ ಹೋರಾಟವನ್ನು ರೈತ ಸಂಘ ಕೈಗೆತ್ತಿಕೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹೇಳಿದರು.
ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರದಲ್ಲಿ ಆಯೋಜನೆ ಗೊಂಡಿದ್ದ ರೈತ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೊಡಗು ಜಿಲ್ಲೆ ಅಭಿವೃದ್ಧಿ ಕಾಣಬೇಕಾದರೆ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಇದರಿಂದ ನಮ್ಮ ಜಿಲ್ಲೆಯ ಏಳಿಗೆ ಸಾಧ್ಯ ಎಂದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ರೈತ ಸಂಘದ ಸದಸ್ಯರು ಇದನ್ನು ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿ ಮುಂದೆ ಪ್ರತ್ಯೇಕ ರಾಜ್ಯದ ಹೋರಾಟ ಕೈಗೆತ್ತಿಕೊಳ್ಳವುದೇ ಲೇಸು ಎಂದು ಸಹಮತ ವ್ಯಕ್ತಪಡಿಸಿದರು. ಚೆಸ್ಕಾಂ ಇಲಾಖೆಯು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡದೇ ಗ್ರಾಹಕರಿಂದ ವಿದ್ಯುತ್ ಬಿಲ್ ಪಡೆಯುತ್ತಿರುವ ಬಗ್ಗೆ ತೀವ್ರ ಚರ್ಚೆ ನಡೆಯಿತು. ಇದೇ ವೇಳೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ರೈತ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ವಾರ್ಷಿಕ ವರದಿ ಮಂಡಿಸಿದರು.
ಕಾನೂನು ಸಲಹೆಗಾರರಾದ ಹೇಮಚಂದ್ರ ಪ್ರಾಸ್ತಾವಿಕ ಮಾತನಾಡಿ, ರೈತ ಸಂಘವು ನಡೆಸಿದ ಹೋರಾಟದ ಮಾಹಿತಿಗಳನ್ನು ಸಭೆಯಲ್ಲಿ ಮಂಡಿಸಿದರು. ರೈತರ ೧೦ ಹೆಚ್.ಪಿ. ಉಚಿತ ವಿದ್ಯುತ್ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದು ಕೊಳ್ಳಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.