ಸೋಮವಾರಪೇಟೆ,ಮೇ.೧೦: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕಲ್ಲುಬಂಡೆ ಉರುಳಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಇಂದು ದುರ್ಮರಣಕ್ಕೀಡಾಗಿರುವ ಘಟನೆ ಸಂಭವಿಸಿದೆ.

ತಾಲೂಕಿನ ಮಾದಾಪುರ ಪೊಲೀಸ್ ಠಾಣೆ ಸಮೀಪದ ನಿವಾಸಿ ಕೂಲಿ ಕಾರ್ಮಿಕ ಚಂದ್ರ ಎಂಬವರ ಪತ್ನಿ ಶಶಿಕಲಾ(೪೯) ಎಂಬವರೇ ಸಾವನ್ನಪ್ಪಿದವರು. ಶಶಿಕಲಾ ಅವರು ಕಳೆದ ತಾ. ೭ರಂದು ಸಹ ಕಾರ್ಮಿಕರೊಂದಿಗೆ ಮಾದಾಪುರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮೇಲಿನಿಂದ ಕಲ್ಲುಬಂಡೆಯೊAದು ಆಕಸ್ಮಿಕವಾಗಿ ಉರುಳಿ ಬಂದಿದೆ. ಈ ಸಂದರ್ಭ ಕಲ್ಲಿಗೆ ಸಿಲುಕಿದ ಶಶಿಕಲಾ ಅವರು ತಕ್ಷಣಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದರು.

ಘಟನೆಯಿಂದ ತಲೆ ಮತ್ತು ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಡಿಕೇರಿಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿತ್ತು.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕಳೆದ ೩ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶಶಿಕಲಾ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸೋಮವಾರಪೇಟೆ ಪೊಲೀಸರು ಮಂಗಳೂರಿಗೆ ತೆರಳಿದ್ದು, ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಕ್ರಮವಹಿಸಿದ್ದಾರೆ. ಮೃತೆ ಶಶಿಕಲಾ ಅವರು ಪತಿ, ಈರ್ವರು ಪುತ್ರರನ್ನು ಅಗಲಿದ್ದಾರೆ.