ಮಡಿಕೇರಿ, ಮೇ ೧೧: ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಸರಕಾರದ ಕ್ರಮವನ್ನು ವಿರೋಧಿಸಿರುವ ಬಹುಜನ ಸಮಾಜ ಪಕ್ಷ; ಒತ್ತುವರಿ ಜಮೀನನ್ನು ತೆರವುಗೊಳಿಸಿ ಭೂರಹಿತರಿಗೆ ಹಂಚಬೇಕೆAದು ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ಜಯಪ್ಪ ಹಾನಗಲ್, ಒತ್ತುವರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡುವದನ್ನು ವಿರೋಧಿಸುತ್ತೇವೆ. ಜಮೀನನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಭೂರಹಿತರಿಗೆ ಹಂಚಬೇಕು. ಅದರಲ್ಲೂ ೫ಎಕರೆಗಿಂತ ಮೇಲ್ಪಟ್ಟು ಜಾಗ ಹೊಂದಿದವರಿಗೆ ಸಕ್ರಮಗೊಳಿಸಬಾರದೆಂದು ಒತ್ತಾಯಿಸಿದರು. ಹೊದ್ದೂರು ಪಾಲೆಮಾಡುವಿನ ಸ್ಮಶಾನ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಬಗೆಹರಿಸಬೇಕು. ಪ್ರತಿಭಟನಾಕಾರರ ಮೇಲೆ ಯಾವದೇ ಕಾನೂನು ಕ್ರಮ ಕೈಗೊಂಡಿದ್ದಲ್ಲಿ ಅದನ್ನು ವಾಪಸ್ ಪಡೆಯಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಕಾಡಿನಲ್ಲೇ ಬಿಡಿ

ಜಿಲ್ಲೆಯ ಎಲ್ಲ ಆದಿವಾಸಿಗಳಿಗೆ ಕಾಡಿನಂಚಿನಲ್ಲಿಯೇ ವಾಸಿಸಲು ಅವಕಾಶ ಮಾಡಿಕೊಡಬೇಕು. ಅವರನ್ನು ಬಲವಂತವಾಗಿ ಕಾಡಿನಿಂದ ಹೊರಹಾಕುವದನ್ನು ವಿರೋಧಿಸುತ್ತೇವೆ; ಆದಿವಾಸಿಗಳಿಂದ ಕಾಡಿಗೆ ಯಾವದೇ ತೊಂದರೆ ಆಗುವದಿಲ್ಲ. ಅವರುಗಳನ್ನು ಒಕ್ಕಲೆಬ್ಬಿಸಿ ಮಾಸ್ತಿಗುಡಿಗೆ ಸ್ಥಳಾಂತರಿಸಲಾಗಿದ್ದು, ಇದೀಗ ಅಲ್ಲಿ ವ್ಯವಸ್ಥೆ ಸರಿ ಇಲ್ಲದೆ ಅವರುಗಳು ವಾಪಸ್ ಬರುತ್ತಿದ್ದಾರೆ. ಅವರುಗಳ ಪರಿಸ್ಥಿತಿ ನೀರಿನಿಂದ ತೆಗೆದ ಮೀನಿನಂತಾಗಿದೆ ಎಂದು ಹೇಳಿದರು.

ಬೇಡಿಕೆ ಈಡೇರಿಸಲಿ

ಬೆಂಗಳೂರಿನ ಸ್ವಾತಂತ್ರö್ಯ ಉದ್ಯಾನವನದಲ್ಲಿ ಕಳೆದ ೯೦ ದಿನಗಳಿಂದ ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಸ್ವಾಮೀಜಿಗಳು ಮೀಸಲಾತಿ ಹೆಚ್ಚಳದ ಬಗ್ಗೆ ಹೋರಾಟ ಮಾಡುತ್ತಿರುವದನ್ನು ಪಕ್ಷ ಬೆಂಬಲಿಸಲಿದೆ. ಹೊರ ರಾಜ್ಯಗಳಿಂದ ಬರುವವರನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರ್ಪಡೆಗೊಳಿಸಲಾಗುತ್ತಿದೆ. ಇದರಿಂದಾಗಿ ಜನಸಂಖ್ಯೆ ಹೆಚ್ಚಳವಾಗುತ್ತಿದೆಯಾದರೂ ಮೀಸಲಾತಿ ಮಾತ್ರ ಹೆಚ್ಚಳವಾಗುತ್ತಿಲ್ಲ. ಸರಕಾರ ಕೂಡಲೇ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ಜಾಗೃತಿ ಕಾರ್ಯಕ್ರಮ

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಅಂಗವಾಗಿ ಪಕ್ಷದ ವತಿಯಿಂದ ಕಳೆದ ಏ. ೧ ರಿಂದ ಮೇ ೩೧ರ ವರೆಗೆ ಹಮ್ಮಿಕೊಂಡಿರುವ ‘ಸಂವಿಧಾನ ರಕ್ಷಿಸೋಣ ದೇಶವನ್ನು ಉಳಿಸೋಣ’ ಜಾಗೃತಿ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆಯ ಜನತೆ ಸಹಕರಿಸಬೇಕೆಂದು ಮನವಿ ಮಾಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಸಿದ್ದಪ್ಪ ಮಾತನಾಡಿ; ಪ್ರತಿ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರು ಇದನ್ನು ಅರ್ಥೈಸಿಕೊಂಡು ಅನುಸರಿಸಿದರೆ ದೇಶದ ಸಮಸ್ಯೆ ಬಗೆಹರಿಯಲಿದೆ ಎಂದರು. ಆದಿವಾಸಿಗಳು ಬೀದಿಗೆ ಬಂದಿದ್ದಾರೆ. ವನವಾಸಿಗಳನ್ನು ಹೊರಹಾಕಿದರೆ ಹೇಗೇ? ಎಂದು ಪ್ರಶ್ನಿಸಿದ ಅವರು, ಮೂಲ ನಿವಾಸಿಗಳನ್ನು ಸ್ಥಳಾಂತರಿಸಿದರೆ ಆಗುವ ಕಷ್ಟಗಳನ್ನು ಅರಿತುಕೊಳ್ಳಬೇಕು. ಅವರುಗಳಿಗೆ ಅಲ್ಲಿಯೇ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಚನ್ನಬಸವಯ್ಯ ಮಾತನಾಡಿ; ಮೀಸಲಾತಿ ವಿಚಾರದಲ್ಲಿ ‘ಸರಕಾರದ ಕ್ರಮ ಕೊಟ್ಟ ಹಾಗೆ ಇರಬೇಕು ಆದರೆ ಅದು ಅವರಿಗೆ ದಕ್ಕಬಾರದು’ ಎಂಬAತಾಗಿದೆ. ಜನಸಂಖ್ಯೆ, ಜಾತಿ ಮಾತ್ರ ಹೆಚ್ಚಾಗುತ್ತಿದ್ದು, ಮೀಸಲಾತಿ ಮಾತ್ರ ಹೆಚ್ಚಾಗುತ್ತಿಲ್ಲ. ಪರಿಶಿಷ್ಟ ಪಂಗಡಗಳ ಸಂಖ್ಯೆ ೪೫ರಿಂದ ೫೦ಕ್ಕೇರಿದ್ದು, ಮೀಸಲಾತಿ ಇನ್ನೂ ಶೇ. ೩ ರಷ್ಟಿದೆ. ಪರಿಶಿಷ್ಟ ಜಾತಿಯಲ್ಲಿ ೭೦ರಿಂದ ೧೦೦ಕ್ಕೇರಿದ್ದು ಮೀಸಲಾತಿ ಶೇ.೧೫ರಷ್ಟಿದೆ. ಜನಗಣತಿ ಆಧಾರದಲ್ಲಿ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.

ಕ್ರೀಡಾಂಗಣ ಸ್ಥಳಾಂತರಿಸಲಿ

ಪಕ್ಷದ ಜಿಲ್ಲಾ ಸಂಯೋಜಕ ಮಹಮ್ಮದ್ ಕುಂಞÂ ಮಾತನಾಡಿ, ಪಾಲೆಮಾಡಿನಲ್ಲಿ ಶೇ. ೯೦ ರಷ್ಟು ಮಂದಿ ಪಾಲೆ ಜನಾಂಗಕ್ಕೆ ಸೇರಿದವರು ನೆಲೆಸಿದ್ದಾರೆ. ಅವರುಗಳಿಗೆ ಸ್ಮಶಾನ ಹಾಗೂ ನವಗ್ರಾಮ ನಿರ್ಮಾಣಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಕ್ರೀಡಾಂಗಣ ನಿರ್ಮಿಸಲು ಬೇರೆ ಜಾಗವಿದೆ. ಇಲ್ಲವಾದಲ್ಲಿ ಸರಕಾರ ಬೇರೆ ಜಾಗ ಖರೀದಿ ಮಾಡಿ ಕ್ರೀಡಾಂಗಣ ನಿರ್ಮಾಣ ಮಾಡಲಿ. ಪ್ರಸ್ತುತ ಪಾಲೆಮಾಡಿನಿಂದ ಕ್ರೀಡಾಂಗಣವನ್ನು ಸ್ಥಳಾಂತರಿಸಬೇಕೆAದು ಆಗ್ರಹಿಸಿದರು.