ಮಡಿಕೇರಿ, ಮೇ ೧೧: ಊಟಿಯಿಂದ ಮಡಿಕೇರಿಗೆ ಬರುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ೩.೫ ಲಕ್ಷ ರೂ.ಗಳ ಚೆಕ್ ಹಾಗೂ ಚೆಕ್‌ಬುಕ್ ಅನ್ನು ಬಿಟ್ಟಿದ್ದ ಪ್ರಯಾಣಿಕರಿಗೆ ಅದನ್ನು ಮರಳಿ ಹಸ್ತಾಂತರ ಮಾಡುವ ಮೂಲಕ ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಾಮಾಣಿಕತೆ ತೋರಿದ್ದಾರೆ.

ತಾ. ೮ ರಂದು ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕಕ್ಕೆ ಸೇರಿದ ಬಸ್‌ನಲ್ಲಿ ಮೂಲತಃ ಪಿರಿಯಾಪಟ್ಟಣ ತಾಲೂಕಿನ ಹಾರೋನಹಳ್ಳಿ ಗ್ರಾಮದ ನಿವಾಸಿ ಜವರೇಗೌಡ ಎಂಬವರು ಪ್ರಯಾಣಿಸಿದ್ದರು. ತಮ್ಮ ನಿಲುಗಡೆಯ ಸಮಯ ಬಂದಾಗ ಜವರೇಗೌಡ ಅವರು ಮೈಸೂರು ರಾಮಕೃಷ್ಣ ನಗರದಲ್ಲಿರುವ ಬ್ಯಾಂಕ್ ಒಂದರ ಖಾತೆ ಹೊಂದಿರುವ ೩.೫ ಲಕ್ಷ ರೂ.ಗಳ ಸಹಿ ಹಾಕಿದ್ದ ಚೆಕ್ ಮತ್ತು ಚೆಕ್‌ಬುಕ್, ಆಧಾರ್ ಕಾರ್ಡ್ಗಳನ್ನು ಬಸ್‌ನಲ್ಲಿಯೇ ಬಿಟ್ಟು ಇಳಿದಿದ್ದರು. ಮಡಿಕೇರಿಗೆ ಬಸ್ ಆಗಮಿಸಿದ ಸಂದರ್ಭ ಕೆಲವು ದಾಖಲಾತಿಗಳು ಬಸ್‌ನಲ್ಲಿಯೇ ಉಳಿದಿರುವುದನ್ನು ಬಸ್‌ನ ನಿರ್ವಾಹಕ ಜೆ. ಭೈರವ ಗಮನಿಸಿದ್ದಾರೆ. ತದನಂತರ ಆಧಾರ್ ಕಾರ್ಡ್ ಮೂಲಕ ಪ್ರಯಾಣಿಕರ ಮಾಹಿತಿ ಸಂಗ್ರಹಿಸಿ ಅವರಿಗೆ ಕರೆ ಮಾಡಿ ಮಡಿಕೇರಿಗೆ ಬರುವಂತೆ ಸೂಚಿಸಿದ್ದಾರೆ. ತಾ. ೯ ರಂದು ಮಡಿಕೇರಿ ಕೆಎಸ್‌ಆರ್‌ಟಿಸಿ ಸಂಚಾರಿ ನಿಯಂತ್ರಣಾಧಿಕಾರಿ ಹರೀಶ್ ಕುಮಾರ್ ಮೂಲಕ ಚೆಕ್ ಮತ್ತು ದಾಖಲಾತಿಗಳನ್ನು ಪ್ರಯಾಣಿಕ ಜವರೇಗೌಡ ಅವರಿಗೆ ಹಸ್ತಾಂತರಿಸುವ ಮೂಲಕ ಬಸ್ ನಿರ್ವಾಹಕ ಭೈರವ ಅವರು ಪ್ರಾಮಾಣಿಕತೆ ತೋರಿದ್ದಾರೆ.