ಮರಗೋಡು, ಮೇ ೧೦: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಆಶ್ರಯದಲ್ಲಿ ಗ್ರಾಮಾಂತರ ಮಟ್ಟದ ಯೂನಿಟಿ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಮರಗೋಡು, ಹೊಸ್ಕೇರಿ, ಅರೆಕಾಡು ಮತ್ತು ಕಟ್ಟೆಮಾಡು ತಂಡಗಳು ರೋಚಕ ಹೋರಾಟ ನಡೆಸಿದವು. ಮೊದಲ ಪಂದ್ಯದಲ್ಲಿ ಅರೆಕಾಡು ತಂಡ ಕಟ್ಟೆಮಾಡು ತಂಡವನ್ನು ೨-೧ ಗೋಲುಗಳಿಂದ ಮಣಿಸಿದರೆ, ಎರಡನೇ ಪಂದ್ಯದಲ್ಲಿ ಹೊಸ್ಕೇರಿ ತಂಡ ಮರಗೋಡು ತಂಡವನ್ನು ೪-೧ ಗೋಲುಗಳಿಂದ ಮಣಿಸಿತು. ಮೂರನೇ ಪಂದ್ಯದಲ್ಲಿ ಮರಗೋಡು ತಂಡ ಕಟ್ಟೆಮಾಡು ವಿರುದ್ಧ ೨-೩ ಗೋಲುಗಳಿಂದ ಸೋಲನುಭವಿಸಿತು. ದಿನದ ನಾಲ್ಕನೇ ಪಂದ್ಯದಲ್ಲಿ ಹೊಸ್ಕೇರಿ ತಂಡವನ್ನ ೪-೨ ಗೋಲುಗಳಿಂದ ಮಣಿಸಿದ ಅರೆಕಾಡು ಫೈನಲ್ ಪ್ರವೇಶಿಸಿತು. ಫೈನಲ್ ಪ್ರವೇಶಿಸುವ ಮತ್ತೊಂದು ತಂಡಕ್ಕಾಗಿ ನಡೆದ ಪಂದ್ಯದಲ್ಲಿ ಕಟ್ಟೆಮಾಡು - ಹೊಸ್ಕೇರಿ ತಂಡ ೧-೧ ಗೋಲುಗಳಿಂದ ಸಮಬಲ ಸಾಧಿಸಿತು. ಅಂತಿಮವಾಗಿ ಗೋಲು ಸರಾಸರಿ ಆಧಾರದ ಮೇಲೆ ಹೊಸ್ಕೇರಿ ತಂಡ ಫೈನಲ್ ಪ್ರವೇಶಿಸಿತು. ತಾ. ೧೫ ರಂದು ಫೈನಲ್ ಪಂದ್ಯಾವಳಿ ನಡೆಯಲಿದೆ. ನಾಳೆಯಿಂದ ಗೌಡ ಕುಟುಂಬಗಳ ಫುಟ್ಬಾಲ್ ಹಣಾಹಣಿ ಮುಂದುವರಿಯಲಿದೆ.