ಕೂಡಿಗೆ, ಮೇ ೧೦ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ (ಹುಲಗುಂದ) ಗ್ರಾಮದಲ್ಲಿರುವ ೨೭೦ ಕುಟುಂಬದವರಿಗೆ ಮೂರು ತಲೆಮಾರು ಕಳೆದರೂ ಸಹ ವಾಸಿಸುತ್ತಿದ್ದ ಜಾಗದ ಹಕ್ಕುಪತ್ರ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ. ಹಾರಂಗಿ ಅಣೆಕಟ್ಟೆಯ ಎಡ ಭಾಗದ ಒಂದು ಕಿಲೋಮೀಟರ್ ದೂರದಲ್ಲಿರುವ ನೂರಾರು ಮನೆಗಳಿಗೆ ಯಾವುದೇ ಸರಕಾರದ ಸೌಲಭ್ಯಗಳು ದೊರಕದೆ ವಂಚಿತರಾಗುತ್ತಿದ್ದಾರೆ.

ಹಾರಂಗಿ ಅಣೆಕಟ್ಟೆಯ ನಿರ್ಮಾಣದ ಸಂದರ್ಭದಲ್ಲಿ ಅಲ್ಲಿನ ಕೆಲಸಗಾರರಿಗೆ ಕಳೆದ ೬೦ ವರ್ಷಗಳ ಹಿಂದೆ ಅಣೆಕಟ್ಟೆಯ ಎದುರು ಇರುವ ಇಲಾಖೆಯ ಜಾಗ ಮತ್ತು ಪೈಸಾರಿ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ವಾಸಿಸಲು ಆಗಿನ ನೀರಾವರಿ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದರು. ಅದರಂತೆ ಕೆಲಸಗಾರರು ಮನೆಗಳನ್ನು ಹಾರಂಗಿಯ ಖಾಲಿ ಜಾಗದಲ್ಲಿ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ ನೀರಾವರಿ ಇಲಾಖೆಯ ವತಿಯಿಂದ ಆಗಲಿ ಅಥವಾ ಬೇರೆ ಇಲಾಖೆಯಿಂದ ವತಿಯಿಂದ ಯಾವುದೇ ರೀತಿಯ ಸೌಲಭ್ಯಗಳು ದೊರಕುತ್ತಿಲ್ಲ ಎಂದು ಗ್ರಾಮಸ್ಥರ ಆರೋಪವಾಗಿದೆ.

೬೦ ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವವರಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಗಾಳಿ ಮಳೆಯಿಂದ ಮನೆ ಹಾನಿಯಾದರೂ ಸಹ ಸರ್ಕಾರದ ಸಹಾಯಧನವು ಸಿಗುವುದಿಲ್ಲ. ಪ್ರಮುಖವಾಗಿ ಯಾವುದೇ ಸೌಲಭ್ಯಗಳನ್ನು ಪಡೆಯಲು ಹಕ್ಕುಪತ್ರ ಇಲ್ಲದಾಗಿದೆ.

ಕಳೆದ ಹತ್ತು ವರ್ಷಗಳಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್ ನೇತೃತ್ವದಲ್ಲಿ ಅಲ್ಲಿನ ನೂರಾರು ಕುಟುಂಬದವರು ಜಿಲ್ಲೆಗೆ ಅಗಮಿಸಿದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಯಾವುದೇ ರೀತಿಯ ಪ್ರಯೋಜನ ಆಗಿರುವುದಿಲ್ಲ ಎಂದು ಹಾರಂಗಿಯಲ್ಲಿ ೬೦ ವರ್ಷಗಳಿಂದ ವಾಸಿಸುತ್ತಿರುವ ವೇಲು, ಮುರುಗನ್, ಗಣೇಶ ಅವರು ಹೇಳುತ್ತಾರೆ.

ಕಳೆದ ೨೦ ವರ್ಷಗಳಿಂದಲೂ ಕ್ಷೇತ್ರದ ಶಾಸಕರಿಕೆ ಮತ್ತು ಸಂಸದರಿಗೆ ಇಲ್ಲಿನ ನಿವಾಸಿಗಳು ಹಾರಂಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿಯನ್ನು ಸಲ್ಲಿಸಿದ್ದು, ಇದುವರೆಗೂ ಯಾವುದೇ ಸ್ಪಂದನ ದೊರೆತಿಲ್ಲ.

ನೀರಾವರಿ ಇಲಾಖೆ ಕೂಡ ಸಮರ್ಪಕವಾದ ದಾಖಲೆಗಳನ್ನು ಕಂದಾಯ ಇಲಾಖೆಗೆ ನೀಡದೆ ಇರುವುದರಿಂದಾಗಿ ಇದುವರೆಗೂ ನಾವು ಇರುವ ಜಾಗದ ಹಕ್ಕುಪತ್ರಗಳು ದೊರಕದಂತೆ ಅಗಿದೆ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಕಳೆದ ೧೫ ವರ್ಷಗಳಿಂದ ಕೂಡುಮಂಗಳೂರು ಗ್ರಾಮ ಪಂಚಾಯಿತಿಯವರು ಕುಡಿಯುವ ನೀರಿನ ವ್ಯವಸ್ಥೆ ಮತ್ತು ಬೀದಿ ದೀಪಗಳ ಮತ್ತು ಶುಚಿತ್ವದ ವ್ಯವಸ್ಥೆಯನ್ನು ಮಾತ್ರ ಮಾಡುತ್ತಿದ್ದಾರೆ. ಗಾಳಿ ಮಳೆಯಿಂದಾಗಿ ಮನೆಗೆ ಹಾನಿ ಉಂಟಾದರೆ ಕಂದಾಯ ಇಲಾಖೆಯ ವತಿಯಿಂದ ಯಾವುದೇ ಪರಿಹಾರ ಇಲ್ಲದಾಗಿದೆ. ಕಡುಬಡವರು ವಾಸಿಸುವ ಈ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮನೆ ನಿರ್ಮಿಸಿ ಕೊಡುವ ವ್ಯವಸ್ಥೆಗೂ ಬಾರಿ ಹಿನ್ನೆಡೆಯಾಗಿದೆ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್ ತಿಳಿಸಿದ್ದಾರೆ.

ಇದಕ್ಕೆ ಸಂಬAಧಿಸಿದAತೆ ಗ್ರಾಮಸ್ಥರು ಅನೇಕ ಬಾರಿ ಮನವಿಯನ್ನು ಸಂಬAಧಿಸಿದವರಿಗೆ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮವನ್ನು ಜಿಲ್ಲಾಧಿಕಾರಿ ತೆಗೆದುಕೊಳ್ಳದೆ ಇರುವುದರಿಂದಾಗಿ ಇಲ್ಲಿನ ನಿವಾಸಿಗಳಿಗೆ ಬಾರಿ ತೊಂದರೆಗಳು ಅಗುತ್ತಿವೆ. ಇವುಗಳನ್ನು ಸರಿಪಡಿಸುವಂತೆ ಈ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರ ಆಗ್ರಹವಾಗಿದೆ.

ಇದಕ್ಕೆ ಸಂಬAಧಿಸಿದ ಮನವಿಯು ರಾಜ್ಯ ಅರ್ಜಿ ಸಮಿತಿಯ ಸಭೆಯಲ್ಲಿ ಇಡಲಾಗಿದೆ. ಅರ್ಜಿ ಸಮಿತಿಯ ತಂಡ ಕೊಡಗು ಜಿಲ್ಲೆಗೆ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಮಣಿ ಕುಮಾರ್, ಭಾಸ್ಕರ್ ನಾಯಕ್ ಮಾಹಿತಿ ನೀಡಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.