ವರದಿ: ಚಂದ್ರಮೋಹನ್

ಕುಶಾಲನಗರ, ಮೇ ೧೦: ಕುಶಾಲನಗರ ಪಟ್ಟಣದಲ್ಲಿ ಅಕ್ರಮ ಹಾಗೂ ನಿಯಮಬಾಹಿರವಾಗಿ ಕಟ್ಟಡಗಳ ನಿರ್ಮಾಣ ಅವ್ಯಾಹತವಾಗಿ ನಡೆಯುತ್ತಿದ್ದು, ಇದೀಗ ಈ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಸಂಬAಧಿಸಿದ ಇಲಾಖೆ ಅಧಿಕಾರಿ ಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ದಿಂದ ಆದೇಶ ಹೊರಬಿದ್ದಿದೆ. ಕಳೆದ ಕೆಲವು ವರ್ಷಗಳಿಂದ ಕುಶಾಲನಗರ ಪಟ್ಟಣದ ಆಯಕಟ್ಟಿನ ಪ್ರದೇಶಗಳಲ್ಲಿ ಭೂದಂಧೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಇದರಲ್ಲಿ ಈ ಹಿಂದೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ್ದ ಕೆಲವು ಅಧಿಕಾರಿಗಳು ಶಾಮೀಲಾಗಿರುವುದು ದೃಢಪಟ್ಟಿದೆ.

ಕುಶಾಲನಗರ -ಮಡಿಕೇರಿ ಹೆದ್ದಾರಿ ರಸ್ತೆ ಒತ್ತಿನಲ್ಲಿ ಹಲವು ಅಕ್ರಮ ಬಹುಮಹಡಿ ಕಟ್ಟಡಗಳು ತಲೆಯೆತ್ತುತ್ತಿದ್ದು, ನಿಯಮಬಾಹಿ ರವಾಗಿ ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳು ನೋಂದಾವಣೆ ಆಗುತ್ತಿದ್ದು, ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಎಡೆಮಾಡಿದೆ.

ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೧ನೇಬ್ಲಾಕ್ ಸರ್ವೆ ನಂಬರ್ ೧೧೫ /೧ ರಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸುತ್ತಿರುವ ಬಗ್ಗೆ ಅಲ್ಲಿನ ನಿವಾಸಿ ಜಗದೀಶ ಎಂಬವರು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ ಮತ್ತಿತರ ಅಧಿಕಾರಿಗಳಿಗೆ ಆದೇಶ ನೀಡಿ ಸಮಗ್ರ ವರದಿ ಸಲ್ಲಿಸಲು ಸೂಚನೆ ನೀಡಿದೆ. ಈ ಜಮೀನಿಗೆ ಸಂಬAಧಿಸಿದAತೆ ಖಾತೆ ನೋಂದಾವಣೆ ಮಾಡದಂತೆ ಹಾಗೂ ಕಾಮಗಾರಿಯನ್ನು ಸ್ಥಗಿತಗೊಳಿಸಲು ಜಮೀನಿನ ಮಾಲೀಕರಿಗೆ ಸೂಚನೆ ನೀಡುವಂತೆ ಅರ್ಜಿ ಸಲ್ಲಿಸಿದ್ದು, ನಕಲಿ ದಾಖಲೆಗಳನ್ನು ಬಳಸಿ ಕಟ್ಟಡ ನಿರ್ಮಾಣ ಹಾಗೂ ನಿವೇಶನಗಳನ್ನು ನೋಂದಾವಣೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಸ್ಥಳೀಯ ನಿವಾಸಿ ಜಗದೀಶ್ ದಾಖಲೆ ಸಹಿತ ಮಾಹಿತಿ ನೀಡಿದ್ದಾರೆ.

ಕುಶಾಲನಗರ ಯೋಜನಾ ಪ್ರಾಧಿಕಾರ ೨೦೦೯ರಲ್ಲಿ ಅಸ್ತಿತ್ವಕ್ಕೆ ಬಂದಿದ್ದರೂ, ಸ್ಥಳೀಯ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಾದ ಸಂದರ್ಭ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಕುಶಾಲನಗರದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧಿಕಾರಿ ಸೇರಿದಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮತ್ತಿತರರು ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಸುಳ್ಳು ದಾಖಲೆಗಳನ್ನು ಒದಗಿಸಿರುವುದು ಕೂಡ ಬೆಳಕಿಗೆ ಬಂದಿದೆ. ಈ ಬಗ್ಗೆ ಕುಶಾಲನಗರ ಯೋಜನಾ ಪ್ರಾಧಿಕಾರ ಹಲವು ನೋಟಿಸ್‌ಗಳನ್ನೂ ನೀಡಿದ್ದು, ಅದಕ್ಕೆ ಯಾವುದೇ ರೀತಿಯ ಸ್ಪಂದನ ನೀಡದ ಜಮೀನಿನ ಭೂಮಾಲೀಕರು ಅನಧಿಕೃತ ಬಡಾವಣೆ, ಬಹುಮಹಡಿ ಕಟ್ಟಡ ನಿರ್ಮಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂ ಪರಿವರ್ತಿತ ಜಮೀನನ್ನು ವಿಭಜಿಸಲು ಪ್ರಾಧಿಕಾರದಿಂದ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಜಮೀನಿಗೆ ಸಂಬAಧಿಸಿದAತೆ ಖಾತೆಯನ್ನು ನೋಂದಾಯಿ ಸಬಾರದೆಂದು ಸಂಬAಧಿಸಿದ ಪಂಚಾಯಿತಿಗೆ ಮನವಿ ಮಾಡಿದರೂ ಕುಶಾಲನಗರ ಪಟ್ಟಣ ಪಂಚಾಯಿತಿ ಹಿಂದಿನ ಮುಖ್ಯ ಅಧಿಕಾರಿ ನಕಲಿ ದಾಖಲೆಗಳನ್ನು ಬಳಸಿ ಎರಡು ನಿವೇಶನಗಳನ್ನು ಸ್ಥಳೀಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಾಯಿಸಿರುವ ಬಗ್ಗೆ ದಾಖಲೆಗಳು ಕಂಡುಬAದಿದೆ ಎಂದು ಜಗದೀಶ್ ತಿಳಿಸಿದ್ದಾರೆ. ಈ ಅಕ್ರಮ ಚಟುವಟಿಕೆಗಳಲ್ಲಿ ಕುಶಾಲನಗರದಲ್ಲಿ ಹಿಂದೆ ಕೆಲಸ ನಿರ್ವಹಿಸಿದ ಪಂಚಾಯಿತಿ ಮತ್ತು ಯೋಜನಾ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಕೆಲವು ಭೂ ದಂಧೆಕೋರರು ಶಾಮೀಲಾಗಿರುವ ಶಂಕೆ ಇದೆ ಎಂದು ಅವರು ದೂರಿದ್ದಾರೆ. ಪ್ರಕರಣದಲ್ಲಿ ಹಲವು ಅಧಿಕಾರಿಗಳು ಶಾಮೀಲಾಗಿದ್ದು ಈ ಬಗ್ಗೆ ಉನ್ನತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಗದೀಶ್ ಒತ್ತಾಯಿಸಿದ್ದಾರೆ. ಅಕ್ರಮ ಪ್ರಕರಣಕ್ಕೆ ಸಂಬAಧಿಸಿದAತೆ ಸೂಕ್ತ ತನಿಖೆ ನಡೆಸಿ ಕಾನೂನುಕ್ರಮ ಕೈಗೊಳ್ಳುವಂತೆ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರೂ ಆಗಿರುವ ಅಮೃತರಾಜ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದರು.

ಕುಶಾಲನಗರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಹುಮಹಡಿ ಕಟ್ಟಡಗಳು ತಲೆಯೆತ್ತುತ್ತಿದ್ದು ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಮೌನವಹಿಸಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಇವೆಲ್ಲದರ ನಡುವೆ ರಾಜ್ಯ ಉಚ್ಚ ನ್ಯಾಯಾಲಯ ಕುಶಾಲನಗರ ಯೋಜನಾ ಪ್ರಾಧಿಕಾರಕ್ಕೆ ನೋಟೀಸ್ ನೀಡಿದ್ದು ತಕ್ಷಣ ಈ ಬಗ್ಗೆ ೮ ವಾರದೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿರುವುದು ಕಂಡು ಬಂದಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್, ಸ್ಥಳ ಪರಿಶೀಲನೆ ಮತ್ತು ಸಮಗ್ರ ದಾಖಲೆ ಪರಿಶೀಲಿಸಿ ರಾಜ್ಯ ಉಚ್ಚನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಈ ಪ್ರಕರಣಗಳ ಬಗ್ಗೆ ದಾಖಲೆ ಕಲೆಹಾಕಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಅಕ್ರಮ ಕಟ್ಟಡ ಮತ್ತು ನಕಲಿ ದಾಖಲೆ ಸೃಷ್ಟಿ ಮಾಡಿ ನಿವೇಶನ ನೋಂದಣಿ ಆಗಿರುವ ಬಗ್ಗೆ ತನಿಖೆ ನಡೆಸಬೇಕೆಂದು ಪಟ್ಟಣ ಪಂಚಾಯಿತಿ ಸದಸ್ಯ ಅಮೃತರಾಜ್ ಆಗ್ರಹಿಸಿದ್ದಾರೆ.