ಸಿದ್ದಾಪುರ, ಮೇ ೧೦: ಕಾಡಾನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದ ಅರಣ್ಯ ಇಲಾಖಾಧಿ ಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಕಾಡಾನೆಗಳೇ ಬೆನ್ನಟ್ಟಿದ ಘಟನೆ ನೆಲ್ಲಿಹುದಿಕೇರಿಯಲ್ಲಿ ನಡೆಯಿತು. ನೆಲ್ಲಿಹುದಿಕೇರಿ ಭಾಗದ ಕಾಟಿಬಾಣೆ, ಅತ್ತಿಮಂಗಲ, ಅಭ್ಯತ್‌ಮಂಗಲ, ಅರೆಕಾಡು ಗ್ರಾಮದ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶ ಗೊಳಿಸುತ್ತಿದೆ. ಮನೆಯ ಎದುರು ನಿಲ್ಲುವ ವಾಹನಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಮಂಗಳವಾರದAದು ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ನೇತೃತ್ವದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಟಾಕಿಗಳನ್ನು ಸಿಡಿಸಿದ್ದರಿಂದ ಕೆಲವು ಕಾಡಾನೆಗಳು ಆಕ್ರೋಶಗೊಂಡು ಕಾರ್ಯಾಚರಣೆ ತಂಡದ ಸಿಬ್ಬಂದಿಗ¼ನ್ನು ಬೆನ್ನಟ್ಟಿದವು.

ಅಪಾಯವನ್ನರಿತ ಸಿಬ್ಬಂದಿ ಎದ್ದು ಬಿದ್ದು ಕಾಫಿ ತೋಟದೊಳಗೆ ಓಡಿ ತಮ್ಮ ಪ್ರಾಣವನ್ನು ರಕ್ಷಿಸಿಕೊಂಡರು. ಕಾಫಿ ತೋಟ ದೊಳಗೆ ಬೀಡುಬಿಟ್ಟಿರುವ ಕಾಡಾನೆಗಳು ಕಾರ್ಯಾಚರಣೆ ಸಂದರ್ಭ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಾ ಕಾರ್ಯಾಚರಣೆ ತಂಡಕ್ಕೆ ಸುಸ್ತು ಬರಿಸಿದವು. ಕಾರ್ಯಾಚರಣೆ ಸಂದರ್ಭ ೧೮ಕ್ಕೂ ಅಧಿಕ ಕಾಡಾನೆಗಳು ಕಂಡು ಬಂದಿದ್ದು, ಈ ಪೈಕಿ ೪ ಮರಿಯಾನೆಗಳು ೪ ಗಂಡಾನೆಗಳು ಇದ್ದವು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಮರಿಯಾನೆಗಳು ಇರುವ ಕಾರಣ ಅವುಗಳನ್ನು ಬಿಟ್ಟು ಕಾಡಿಗೆ ತೆರಳಲು ಕಾಡಾನೆಗಳು ಹಿಂದೇಟು ಹಾಕುತ್ತಿದ್ದು, ಕಾರ್ಯಾಚರಣೆ ತಂಡ ಬೆಳಗ್ಗಿನಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿ ದಣಿಯಿತು. ಕಾಡಾನೆಗಳನ್ನು ದುಬಾರೆ ಅರಣ್ಯಕ್ಕೆ ಅಟ್ಟಲಾಗುತ್ತಿದ್ದು, ಒಂದು ವೇಳೆ ಅರಣ್ಯಕ್ಕೆ ತೆರಳದಿದ್ದಲ್ಲಿ ಕಾರ್ಯಾ ಚರಣೆಯನ್ನು ಮುಂದುವರಿಸಲು ಅರಣ್ಯ ಇಲಾಖಾಧಿಕಾರಿಗಳು ಚಿಂತಿಸುತ್ತಿದ್ದಾರೆ. ಈ ನಡುವೆ ಹಿಂಡಿನಲ್ಲಿರುವ ಕಾಡಾನೆಗಳು ಬೇರ್ಪಟ್ಟು ಬೇರೆ ಗುಂಪಿನಲ್ಲಿ ಸೇರಿ ರಾತ್ರಿ ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

- ವರದಿ: ವಾಸು ಎ.ಎನ್.