(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಮೇ ೧೦: ಹೆಚ್.ಡಿ. ಕೋಟೆ ತಾಲೂಕಿನ ಮಾಸ್ತಿಗುಡಿಯ ಪುನರ್ವಸತಿ ಕೇಂದ್ರದಲ್ಲಿ ಬದುಕು ಕಟ್ಟಿಕೊಂಡಿದ್ದ ನೂರಾರು ಆದಿವಾಸಿಗಳ ಕುಟುಂಬಕ್ಕೆ ಸರಿಯಾದ ರೀತಿಯಲ್ಲಿ ಪಹಣಿ ಪತ್ರ ಹಾಗೂ ಕೃಷಿ ಭೂಮಿ ಸಮತಟ್ಟು ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಬಾಳೆಲೆ ಗ್ರಾಮ ಪಂಚಾಯಿತಿ ರಾಜಪುರ ಸಮೀಪದ ಅಡುಗುಂಡಿ ಅರಣ್ಯ ಪ್ರದೇಶದತ್ತ ಮುಖ ಮಾಡಿ ಪ್ರತಿಭಟನೆ ಆರಂಭಿಸಿದ ನಂತರ ಎಚ್ಚೆತ್ತ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದೀಗ ಆದಿವಾಸಿಗಳ ಪುನರ್ವಸತಿ ಕೇಂದ್ರ ಮಾಸ್ತಿಗುಡಿಯಲ್ಲಿ ಇರುವ ಕೃಷಿ ಭೂಮಿಯನ್ನು ಸಮತಟ್ಟು ಮಾಡುವ ಕಾರ್ಯದ ವೇಗ ಹೆಚ್ಚಿಸಿದ್ದಾರೆ.

ಆದಿವಾಸಿಗಳ ಪ್ರತಿಭಟನೆಯ ಕಾವು ಏರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೆಚ್ಚಿನ ಟ್ರಾö್ಯಕ್ಟರ್‌ಗಳನ್ನು ಭೂಮಿ ಸಮತಟ್ಟು ಮಾಡಲು ಬಿಟ್ಟಿದ್ದಾರೆ.

ಮಂಗಳವಾರ ಮುಂಜಾನೆ ಯಿಂದಲೇ ಟ್ರಾö್ಯಕ್ಟರ್‌ಗಳು ಭೂಮಿಯನ್ನು ಸಮತಟ್ಟು ಮಾಡುವ ಕಾರ್ಯದಲ್ಲಿ ತೊಡಗಿದ್ದವು. ಅಡುಗುಂಡಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಹುಣಸೂರು ವನ್ಯಜೀವಿ ವಿಭಾಗದ ಡಿಎಫ್‌ಓ ಮಹೇಶ್ ಕುಮಾರ್ ಆಗಮಿಸಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.

ಈ ವೇಳೆ ಪ್ರತಿಭಟನಾಕಾರರು ಭೂಮಿ ಸಮತಟ್ಟು ಮಾಡುವಂತೆ ಹಾಗೂ ಮೂರು ಎಕರೆಗೆ ಪಹಣಿ ಪತ್ರ ನೀಡುವಂತೆ ಪಟ್ಟು ಹಿಡಿದಿದ್ದರು.

ಆದಿವಾಸಿಗಳ ಮಾತಿಗೆ ಮನ್ನಣೆ ನೀಡಿದ ಹುಣಸೂರು ತಾಲೂಕಿನ ಎ.ಸಿ. ವರ್ಣಿತ್ ನೇಗಿ ತಕ್ಷಣವೇ ಪಹಣಿ ಪತ್ರ ನೀಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು.

ಆದಿವಾಸಿಗಳು ಅಹೋರಾತ್ರಿ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಸಲು ಪಟ್ಟು ಹಿಡಿದಿದ್ದಾರೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ಆದಿವಾಸಿಗಳು ರಾತ್ರಿಯಿಡೀ ಪ್ರತಿಭಟನೆ ಮುಂದುವರಿಸಿದರು.

ಸ್ಥಳಕ್ಕೆ ಮೈಸೂರು ಜಿಲ್ಲಾಧಿಕಾರಿ ಹಾಗೂ ಕೊಡಗು ಜಿಲ್ಲಾಧಿಕಾರಿ ಆಗಮಿಸಿದ್ದು, ತಮ್ಮ ಅಹವಾಲು ಸ್ವೀಕರಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು.

ಸ್ಥಳದಲ್ಲಿ ಪೊಲೀಸ್ ಪಹರೆ ಮುಂದುವರೆದಿದೆ, ಅರಣ್ಯ ಇಲಾಖೆಯ ಅಧಿಕಾರಿಗಳು,ಇತರ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅರಣ್ಯ ಇಲಾಖೆಯ ವತಿಯಿಂದ ಪ್ರತಿಭಟನಾ ನಿರತ ಆದಿವಾಸಿಗಳಿಗೆ ಊಟ ಹಾಗೂ ತಿಂಡಿಯ ವ್ಯವಸ್ಥೆಯನ್ನು ಸಮಯಕ್ಕೆ ಸರಿಯಾಗಿ ಒದಗಿಸಲಾಗುತ್ತಿದೆ.