ಮಡಿಕೇರಿ, ಮೇ ೯ : ರಸ್ತೆ ಗುಂಡಿಯಿAದಾಗಿ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಜಿಲ್ಲೆಯ ೬ ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಡಿಕೇರಿ ಸರಕಾರಿ ಬಸ್ ನಿಲ್ದಾಣದಿಂದ ತಾ. ೮ ರ ಸಂಜೆ ೬.೩೦ಕ್ಕೆ ಹೊರಟ ಬಸ್ ರಾತ್ರಿ ಬೆಂಗಳೂರಿನ ಮೈಸೂರು ರೋಡ್‌ನಲ್ಲಿ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ. ಕೆ.ಆರ್. ನಗರ ಡಿಪೋಗೆ ಸೇರಿದ ಬಸ್ಸಿನಲ್ಲಿ ಸುಮಾರು ೪೫ ಮಂದಿ ಪ್ರಯಾಣಿಕರಿದ್ದರು. ಇದರಲ್ಲಿ ಜಿಲ್ಲೆಯ ೬ ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ ಮಾಹಿತಿ ನೀಡಿದ್ದಾರೆ.

ಗುಂಡಿಗೆ ಇಳಿದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೆಟ್ರೋ ಪಿಲ್ಲರ್ ಇಲ್ಲದಿದ್ದಿದ್ದರೆ ಬಸ್ ಮತ್ತೊಂದು ಭಾಗದ ರಸ್ತೆಗೆ ಹೋಗಿ ದೊಡ್ಡ ಅನಾಹುತವೇ ಸಂಭವಿಸುತಿತ್ತು. ನಾಲ್ಕು ಅಡಿಯ ತಡೆಗೋಡೆಗೆ ಗುದ್ದಿ ಕೊನೆಗೆ ಪಿಲ್ಲರ್‌ಗೆ ಬಸ್ ಅಪ್ಪಳಿಸಿದೆ. ಪಿಲ್ಲರ್ ನಂಬರ್ ೫೪೬ ಬಳಿ ದೊಡ್ಡ ಗುಂಡಿ ಬಿದ್ದಿದೆ. ಘಟನೆಯಿಂದ ಚಾಲಕ ಬಿ.ಜೆ . ಮಂಜುನಾಥ್ ಹಾಗೂ ಕಂಡೆಕ್ಟರ್ ವೆಂಕಟರಮಣ ಅವರಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.