ಪೆರಾಜೆ, ಮೇ ೯: ಕೊಡಗು-ದಕ್ಷಿಣ ಕನ್ನಡ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬ ತಂಡಗಳ ನಡುವೆ ಭಾಗಮಂಡಲದ ಕೋರಂಗಾಲ ನಾಡು ನಂಗಾರು ಕುಟುಂಬ ಆಯೋಜನೆ ಮಾಡಿದ್ದ ದ್ವಿತೀಯ ವರ್ಷದ ಕಬಡ್ಡಿ ಪಂದ್ಯಾವಳಿಯಲ್ಲಿ ಪೆರಾಜೆಯ ಕುಂಬಳಚೇರಿ ಮನೆ ತಂಡ ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಮಡಿಕೇರಿಯ ಪುದಿಯನೆರವನ ಕುಟುಂಬ ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿತು.
ಪೆರಾಜೆಯ ಮಜಿಕೋಡಿ ತಂಡ ಮೂರನೇ ಹಾಗೂ ಸುಳ್ಯದ ಕುದ್ಪಾಜೆ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಕುಂಬಳಚೇರಿ ಮನೆ ತಂಡದ ತಾರೇಶ್ ಬೆಸ್ಟ್ ಆಲ್ರೌಂಡರ್ ಹಾಗೂ ಪ್ರದೀಪ್ ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಪಡೆದುಕೊಂಡರು. ಮಹಿಳಾ ವಿಭಾಗದ ಕಬಡ್ಡಿಯಲ್ಲಿ ಪೆರಾಜೆಯ ಪೆರುಮುಂಡ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ ಆತಿಥೇಯ ನಂಗಾರು ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿತು. ಪಂದ್ಯಾವಳಿಯಲ್ಲಿ ೩೭ ಕುಟುಂಬ ತಂಡಗಳು ಭಾಗವಹಿಸಿದ್ದವು.