ಸೋಮವಾರಪೇಟೆ, ಮೇ ೯: ಕೊಡಗಿನ ರೈತರು ಕೃಷಿ ಚಟುವಟಿಕೆಗಳಿಗೆ ಬಳಸುತ್ತಿರುವ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮುಂದಿನ ೧೫ ದಿನಗಳ ಒಳಗೆ ಅಧಿಕೃತ ಆದೇಶ ಹೊರಬರುವ ನಿರೀಕ್ಷೆಯಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ತಿಳಿಸಿದರು.
ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕರು, ದೊಡ್ಡಕೊಡ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
೨೦೧೬ರಲ್ಲಿಯೇ ಬಳ್ಳಾರಿ ಭೇಟಿ ಸಂದರ್ಭ ಹೊಸಪೇಟೆಯಲ್ಲಿ ಉಚಿತ ವಿದ್ಯುತ್ ನೀಡುತ್ತಿರುವ ಬಗ್ಗೆ ಮನಗಂಡು, ಕೊಡಗಿನ ರೈತರಿಗೂ ಈ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದ ಸಂದರ್ಭ ಕ್ರಮವಹಿಸ ಲಾಗಿತ್ತಾದರೂ ಅಧಿಕಾರಿಗಳು ಮನಸ್ಸು ಮಾಡಿರಲಿಲ್ಲ. ಇದೀಗ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದ್ದು, ಮುಂದಿನ ೧೫ ದಿನಗಳ ಒಳಗೆ ಅಧಿಕೃತ ಆದೇಶ ಹೊರಬರುವ ನಿರೀಕ್ಷೆಯಿದೆ ಎಂದರು.
ಈ ನಡುವೆ ಇಂಧನ ಇಲಾಖೆಯ ಕಾರ್ಯದರ್ಶಿಗಳು ಜಿಲ್ಲಾ ರೈತ ಸಂಘದ ಮುಖಂಡರಿಗೆ ಬರೆದಿರುವ ಪತ್ರದಲ್ಲಿ ಉಚಿತ ವಿದ್ಯುತ್ ನೀಡುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಕೊಡಗಿನ ಬೆಳೆಗಾರರಿಗೆ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡುವುದಾಗಿ ಭರವಸೆಯಿತ್ತಿದ್ದಾರೆ. ಉಚಿತ ವಿದ್ಯುತ್ ಬಗ್ಗೆ ರೈತರು ಹತಾಶರಾಗುವುದು ಬೇಡ ಎಂದು ರಂಜನ್ ಹೇಳಿದರು.
ಪ್ರಮುಖವಾಗಿ ಕೊಡಗು, ಚಿಕ್ಕಮಗಳೂರು, ಹಾಸನದ ಬೆಳೆಗಾರರು ಕಾಫಿ ತೋಟಗಳಿಗೆ ನೀರು ಹಾಯಿಸಲು ವಿದ್ಯುತ್ ಪಡೆದಿದ್ದಾರೆ. ರಾಜ್ಯದಲ್ಲಿ ಸರಾಸರಿ ೧೪ ಸಾವಿರ ಕೋಟಿ ವಿದ್ಯುತ್ ಇಲಾಖೆಗೆ ಬರಲು ಬಾಕಿ ಇದೆ. ಇದರಲ್ಲಿ ಕೊಡಗಿನ ಪಾಲು ಕೇವಲ ೧೨ ಕೋಟಿ ಮಾತ್ರ. ಮೂರೂ ಜಿಲ್ಲೆಗಳಿಂದ ೨೯ ಕೋಟಿ ಬಾಕಿಯಿದೆ. ೧೪ ಸಾವಿರ ಕೋಟಿಯ ಎದುರು ೨೯ ಕೋಟಿ ಸರ್ಕಾರಕ್ಕೆ ಹೊರೆಯಾಗುವುದಿಲ್ಲ. ಈ ಶುಲ್ಕವನ್ನು ಕೈಬಿಟ್ಟು, ಮುಂದಿನ ದಿನಗಳಲ್ಲಿ ಕೊಡಗಿನ ಎಲ್ಲಾ ಬೆಳೆಗಾರರ ೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಬೇಕೆಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಿರಿಕೊಡ್ಲಿ ಮಠಾಧೀಶರಾದ ಶ್ರೀಸದಾಶಿವ ಸ್ವಾಮೀಜಿ, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷ ಶೋಭಿತ್, ಪ್ರಮುಖರಾದ ನಾಗರಾಜು, ಪ್ರಸಾದ್ ಪಟೇಲ್, ಕ್ಯಾತೆ ಶಿವು, ಕಿಬ್ಬೆಟ್ಟ ಮಧು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುಕ್ಮಿಣಿ ಪಾಂಡುರAಗ ದೇವಾಲಯ ಸಮೀಪ ತಡೆಗೋಡೆ ನಿರ್ಮಾಣ, ಬಸವೇಶ್ವರ ದೇವಾಲಯ ರಸ್ತೆ ಅಭಿವೃದ್ಧಿ, ರಾಮಮಂದಿರ ರಸ್ತೆಯ ರಕ್ಷಣಾ ಕಾಮಗಾರಿ ಮತ್ತು ರಸ್ತೆ, ಕರ್ನಾಟಕ ಬ್ಯಾಂಕ್ ರಸ್ತೆ, ವಿಎಸ್‌ಎಸ್‌ಎನ್‌ನಿಂದ ಜ್ಞಾನಮಂದಿರ ರಸ್ತೆ, ಸಿಡಿಗಳಲೆ ಮಠದ ರಸ್ತೆ, ದೊಡ್ಡಕೊಡ್ಲಿ ಹೊಸ ಕಾಲೋನಿ ರಸ್ತೆ, ಅಂಬೇಡ್ಕರ್ ಭವನದ ಹಿಂಭಾಗ ಪರಿಶಿಷ್ಟ ಜಾತಿ ಕಾಲೋನಿ ರಸ್ತೆಗಳನ್ನು ತಲಾ ೫ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಇದರೊಂದಿಗೆ ಹೇಮಾವತಿ ಪುನರ್ವಸತಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವ ರಸ್ತೆ ಕಾಮಗಾರಿ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಿರುವ ೬.೬೫ ಕೋಟಿ ವೆಚ್ಚದ ಕುಡಿಯುವ ನೀರಿನ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.