ಮಡಿಕೇರಿ, ಮೇ ೯: ನಗರದ ಮುತ್ತಪ್ಪ ದೇವಾಲಯದ ಆವರಣದಲ್ಲಿ ಪಾರ್ವತಿ, ಸರಸ್ವತಿ, ಮಹಾಲಕ್ಷ್ಮಿ ಸಂಕಲ್ಪದಲ್ಲಿರುವ ಭಗವತಿ ದೇವಿಗೆ ಪೊಂಗಾಲ ಸೇವೆ ನಡೆಯಿತು.

ಮಹಿಳೆಯರು ಪೊಂಗಾಲ ಸೇವೆಯಲ್ಲಿ ತೊಡಗಿಸಿಕೊಂಡರು. ಇಟ್ಟಿಗೆ ಅಥವಾ ಕಲ್ಲುಗಳನ್ನು ಜೋಡಿಸಿ ಒಲೆಯನ್ನು ಮಾಡಿ ಸೌದೆಗಳನ್ನು ಜೋಡಿಸಿ ಸಿದ್ಧಪಡಿಸಿದ ನಂತರ ಅರ್ಚಕರು ನೀಡಿದ ಕರ್ಪೂರದಾರತಿಯಿಂದ ಒಲೆ ಉರಿಸಿ, ಹೊಸ ಮಡಿಕೆಯಲ್ಲಿ ನೀರು ತುಂಬಿಸಿ ಪೊಂಗಾಲ ತಯಾರಿ ಮಾಡಿ ದೇವರಿಗೆ ಅರ್ಪಿಸಲಾಯಿತು.

ನಗರದ ಭಕ್ತ ಮಹಿಳೆಯರು ಮೂರು ದಿನಗಳ ಕಾಲ ವ್ರತದಲ್ಲಿದ್ದು, ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಧರ್ಮದರ್ಶಿ ಕೆ.ಎಸ್. ರಮೇಶ್, ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಮುತ್ತಪ್ಪ, ಮಹಿಳಾ ವೇದಿಕೆಯ ರಾಣಿ ಮುತ್ತಮ್ಮ, ತಿಮ್ಮಯ್ಯ, ದೀಪಾ ಕಾವೇರಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.