ಗೋಣಿಕೊಪ್ಪ ವರದಿ, ಮೇ ೯: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಲೀಗ್ ಟೂರ್ನಿಯಲ್ಲಿ ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ತಂಡ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಿತು. ಬೊಟ್ಯತ್‌ನಾಡ್ ಕುಂದ ತಂಡವನ್ನು ಶೂಟೌಟ್‌ನಲ್ಲಿ ಮಣಿಸಿ ಈ ಸಾಧನೆ ಮಾಡಿತು. ಬ್ಲೇಜ್, ಡ್ರಿಬ್ಲರ್ಸ್, ಪೊದ್ದಮಾನಿ, ವೀರಾಜಪೇಟೆ ಕೊಡವ ಸಮಾಜ ಹಾಗೂ ಹಾತೂರು ಗೆಲುವಿನ ನಗೆ ಬೀರಿದ್ದು, ಮಲ್ಮ ಮತ್ತು ಕೋಣನಕಟ್ಟೆ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.
ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಬೊಟ್ಯತ್‌ನಾಡ್ ಕುಂದ ತಂಡವನ್ನು ಶೂಟೌಟ್‌ನಲ್ಲಿ ೭-೩ ಗೋಲುಗಳಿಂದ ಸೋಲಿಸಿ ಸಾಧನೆ ಮಾಡಿತು. ಪಂದ್ಯದ ಅವಧಿಯಲ್ಲಿ ೩-೩ ಗೋಲುಗಳಿಂದ ಪಂದ್ಯ ಟೈ ಸಾಧಿಸಿತು. ಟೈಬ್ರೇಕರ್‌ನಲ್ಲಿ ಅಮ್ಮತ್ತಿ ೪ ಗೋಲು ಬಾರಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತು. ೩೮ ನೇ ನಿಮಿಷದಲ್ಲಿ ಅಮ್ಮತ್ತಿ ತಂಡದ ಆಟಗಾರ ಪ್ರತಿಕ್ ಪೂವಣ್ಣ, ೧೭ ರಲ್ಲಿ ನಾಣಯ್ಯ, ೨೪ ರಲ್ಲಿ ಗಣಪ ಗೋಲು ಹೊಡೆದು. ೨೯ ರಲ್ಲಿ ಬೊಟ್ಯತ್‌ನಾಡ್ ತಂಡದ ಆಟಗಾರ ಜತನ್, ೩೬, ೪೦ ರಲ್ಲಿ ಉತ್ತಯ್ಯ ಎರಡು ಗೋಲು ಹೊಡೆದರು.
ಬ್ಲೇಜ್ ತಂಡವು ನಾಲಡಿ ತಂಡವನ್ನು ೩-೦ ಗೋಲುಗಳಿಂದ ಮಣಿಸಿತು. ೨೯ನೇ ನಿಮಿಷದಲ್ಲಿ ಪ್ರಜ್ವಲ್, ೩೦ ರಲ್ಲಿ ರೋಕ್ಷಲ್, ೩೯ ರಲ್ಲಿ ಕರುಂಬಯ್ಯ ಗೋಲು ಹೊಡೆದರು.
ಡ್ರಿಬ್ಲರ್ಸ್ ತಂಡಕ್ಕೆ ಜಿಟಿಎ ವಿರುದ್ಧ ೩-೦ ಗೋಲುಗಳ ಜಯ ದೊರೆಯಿತು. ೧೭ನೇ ನಿಮಿಷದಲ್ಲಿ ಕರುಣ್, ೩೧ ರಲ್ಲಿ ರೋಶನ್, ೩೫ ರಲ್ಲಿ ತಮ್ಮಯ್ಯ ಗೋಲು ದಾಖಲಿಸಿದರು.
ಪೊದ್ದಮಾನಿ ತಂಡವು ಮಾರ್ಷಲ್ ಸೈಡ್ ತಂಡವನ್ನು
೨-೦ ಗೋಲುಗಳಿಂದ ಸೋಲಿಸಿತು. ೨೯ ಹಾಗೂ ೩೦ನೇ ನಿಮಿಷಗಳಲ್ಲಿ ಪೊನ್ನಣ್ಣ ಎರಡು ಗೋಲು ಹೊಡೆದು ಗೆಲುವು ತಂದುಕೊಟ್ಟರು.
ಮಲ್ಮ ಮತ್ತು ಕೋಣನಕಟ್ಟೆ ತಂಡಗಳ ನಡುವಿನ ಪಂದ್ಯ ೧-೧ ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಯಿತು. ಕೋಣನಕಟ್ಟೆ ಆಟಗಾರ ಯಶ್ವಿನ್ ೩ನೇ ನಿಮಿಷದಲ್ಲಿ ಗೋಲು ಹೊಡೆದರು. ಮಲ್ಮ ಪರ ೨೮ನೇ ನಿಮಿಷದಲ್ಲಿ ಯಶ್ವಂತ್ ಗೋಲು ಬಾರಿಸಿದರು.
ವೀರಾಜಪೇಟೆ ಕೊಡವ ಸಮಾಜ ತಂಡವು ಬೊಳಿಯೂರ್ ತಂಡದ ವಿರುದ್ಧ ೨-೦ ಗೋಲುಗಳಿಂದ ಗೆದ್ದು ಬೀಗಿತು. ೫ನೇ ನಿಮಿಷದಲ್ಲಿ ಲಿಕಿತ್, ೧೯ ರಲ್ಲಿ ಜೀವನ್ ಗೋಲು ಹೊಡೆದರು.
ಹಾತೂರು ತಂಡ ಶ್ರೀಮಂಗಲ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿತು. ಹಾತೂರು ಆಟಗಾರ ರೋಹನ್ ೧೭ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.