*ಗೋಣಿಕೊಪ್ಪ, ಮೇ ೯: ಪೈಸಾರಿ ಜಾಗದಲ್ಲಿ ಕಾಫಿ, ಮೆಣಸು ಇನ್ನಿತರ ಬೆಳೆಗಳನ್ನು ಬೆಳೆದು ಒತ್ತುವರಿ ಮಾಡಿಕೊಂಡ ಜಾಗವನ್ನು ೩೦ ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ತೆಗೆದುಕೊಂಡ ನಿರ್ಧಾರ ಜಿಲ್ಲೆಯ ಬೆಳೆಗಾರರ ಹಿತದೃಷ್ಟಿಯನ್ನು ಕಾಪಾಡುವ ಚಿಂತನೆಯಾಗಿದೆ ಎಂದು ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೊನ್ನಂಪೇಟೆ ನಿರೀಕ್ಷಣಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರುಗಳ ಪ್ರಯತ್ನದಿಂದ ಈ ವ್ಯವಸ್ಥೆ ಕಾರ್ಯಗತಗೊಂಡಿದೆ. ಈ ವಿಚಾರದ ಬಗ್ಗೆ ತಾ. ೧೨ ರಂದು ಮಡಿಕೇರಿಯ ಕ್ರಿಸ್ಟಲ್ ಹಾಲ್‌ನಲ್ಲಿ ಬೆಳೆಗಾರರ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಅವರ ಉಪಸ್ಥಿತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಜಾಗ ನೀಡುವ ಬಗ್ಗೆ ಕೂಲಂಕುಷವಾದ ಚರ್ಚೆ ನಡೆಯಲಿದೆ. ಜಿಲ್ಲೆಯ ಪ್ರತಿಯೊಬ್ಬ ಬೆಳೆಗಾರನು ಸಭೆಯಲ್ಲಿ ಭಾಗವಹಿಸಿ ಬೆಳೆಗಾರರ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರುವ ಪ್ರಯತ್ನ ನಡೆಸಬೇಕಾಗಿದೆ. ಜತೆಗೆ ಪೌತಿ ಖಾತೆ, ಆರ್.ಟಿ.ಸಿ.ಯಲ್ಲಿನ

(ಮೊದಲ ಪುಟದಿಂದ) ಇನ್ನಿತರ ಸಮಸ್ಯೆಗಳ ಬಗ್ಗೆಯೂ ಅಂದು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ನೇರವಾಗಿ ಸಚಿವರಿಂದ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯನ್ನು ಜಿಲ್ಲೆಯ ಶಾಸಕರು ಬೆಳೆಗಾರರಿಗೆ ಕಲ್ಪಿಸಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಬೆಳೆಗಾರರು ಮುಂದಾಗಬೇಕೆAದು ತಿಳಿಸಿದರು. ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಮಾತನಾಡಿ, ತಾಂತ್ರಿಕ ಸಮಸ್ಯೆಗಳಿಂದ ಹಲವು ವರ್ಷಗಳಿಂದ ಬೆಳೆಗಾರರು ಒತ್ತುವರಿ ಮಾಡಿಕೊಂಡ ಜಾಗ ಬೆಳೆಗಾರನ ಸುಪರ್ಧಿಗೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ಸರ್ಕಾರ ಕಂದಾಯ ಇಲಾಖೆಯ ಮೂಲಕ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಚಿಂತನೆ ಹರಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯ ತೀತಮಾಡ ಲಾಲ ಭೀಮಯ್ಯ, ದಿನೇಶ್ ಉಪಸ್ಥಿತರಿದ್ದರು.