*ಗೋಣಿಕೊಪ್ಪ, ಮೇ ೮: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ೧೦೭ ವರ್ಷಗಳ ಹಿಂದೆ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಇಂದು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಮತ್ತು ಸ್ವಾಭಿಮಾನದ ಸಂಸ್ಥೆಯಾಗಿ ಬೆಳೆದು ನಿಂತಿರುವುದು ಹೆಮ್ಮೆ ತರುವಂತಹದ್ದಾಗಿದೆ ಎಂದು ಸಾಹಿತಿ ಡಾ. ಜೆ. ಸೋಮಣ್ಣ ಹೇಳಿದರು.
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ೧೦೭ನೇ ಸಂಸ್ಥಾಪನಾ ದಿನಾಚರಣೆ ಯಲ್ಲಿ ಮಾತನಾಡಿದ ಅವರು, ಭಾಷೆಗಳ ಆಧಾರದ ಮೇಲೆ ಒಂದುಗೂಡಿದ ನಾಡನ್ನು ನಮ್ಮ ಹಿರಿಯರು ಸಾಹಿತ್ಯ ಮತ್ತು ಸಂಸ್ಕೃತಿ ಮೂಲಕ ಶ್ರೀಮಂತಗೊಳಿಸಿದ್ದಾರೆ. ಇದನ್ನು ನಾವು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಕಲೆ ಮತ್ತು ಸಾಹಿತ್ಯ ಮನಸ್ಸನ್ನು ಒಂದುಗೂಡಿಸುತ್ತವೆ. ರಾಜಕೀಯ ಕಾರಣದಿಂದ ಒಂದುಗೂಡಬೇಕಾಗಿದ್ದ ಹೃದಯಗಳು ಒಡೆದು ಛಿದ್ರವಾಗಿರುವ ಈ ಸಂದರ್ಭದಲ್ಲಿ ಪರಸ್ಪರ ಹೃದಯಗಳನ್ನು ಬೆಸೆಯುವ ಸಾಹಿತ್ಯ ಪರ ಚಟುವಟಿಕೆಗಳನ್ನು ಹೆಚ್ಚು ಹೆಚ್ಚಾಗಿ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ರಂಗಭೂಮಿ ಕಲಾವಿದ ಟಿ.ಎನ್. ಶ್ರೀನಿವಾಸ್ ನಾಯ್ಡು ಮಾತನಾಡಿ, ಭಾಷೆ ಮೇಲಿನ ಅಭಿಮಾನ ತಮ್ಮಲ್ಲಿಯೇ ಹುಟ್ಟಿಕೊಳ್ಳಬೇಕು. ಅದು ಇನ್ನೊಬ್ಬರಿಂದ ಬಲವಂತವಾಗಿ ಹೇರುವಂತಾಗಬಾರದು. ಕನ್ನಡ ಅತ್ಯಂತ ಸುಲಲಿತವಾದ ಭಾಷೆ. ಇಲ್ಲಿರುವ ಶಬ್ದ ಸಂಪತ್ತು ಮತ್ತು ಭಾಷಾ ಮಾಧುರ್ಯ ಅನನ್ಯವಾದುದು. ನಮ್ಮ ಹಿರಿಯರು ಬೆಳೆಸಿದ ನಾಡು ನುಡಿ ಸಂಪತ್ತನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಮಾತನಾಡಿ, ಅರಿಶಿನ ಮತ್ತು ಕೆಂಪು ಬಣ್ಣದಿಂದ ಕೂಡಿರುವ ಕನ್ನಡ ಧ್ವಜವನ್ನು ನಮ್ಮ ಹಿರಿಯರು ಬಹು ಅರ್ಥಪೂರ್ಣವಾಗಿಯೇ ಆಯ್ಕೆ ಮಾಡಿದ್ದಾರೆ. ಧ್ವಜದಲ್ಲಿರುವ ತಾಯಿ ಭುವನೇಶ್ವರಿ ಚಿತ್ರದ ಭಕ್ತಿ ಪರ್ವಕ ಕಲ್ಪನೆಯೊಂದಿಗೆ ಸಾಹಿತ್ಯದ ಗ್ರಂಥಗಳನ್ನು ಭಕ್ತಿಪೂರ್ವಕವಾಗಿ ಅಧ್ಯಯನ ಮಾಡಿದರೆ ಸಾಹಿತ್ಯ ಸರಸ್ವತಿ ಒಲಿಯಲಿದ್ದಾಳೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಕಲೆ ಮತ್ತು ಸಾಹಿತ್ಯವನ್ನು ಒಂದುಗೂಡಿಸಿ ನಾಡನ್ನು ಸಂಪದ್ಭರಿತವಾಗಿ ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಪೊನ್ನಂಪೇಟೆ ತಾಲೂಕಿನಲ್ಲಿರುವ ಎಲ್ಲ ಕಲಾವಿದರು ಮತ್ತು ಸಾಹಿತಿಗಳನ್ನು ಒಂದುಗೂಡಿಸಿ ಸಾಹಿತ್ಯ ಪರಿಷತ್ತಿನ ರಥವನ್ನು ಸಮರ್ಥವಾಗಿ ಮುಂದಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಜೆ. ಸೋಮಣ್ಣ, ಮುಖ್ಯ ಶಿಕ್ಷಕ ವಿಜಯ ಮಾತ ನಾಡಿದರು. ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರಾಮಕೃಷ್ಣ, ಪದಾಧಿ ಕಾರಿಗಳಾದ ವಾಮನ, ಟಿ.ಆರ್. ವಿನೋದ್, ವಿ.ಬಿ. ರುದ್ರಪ್ಪ, ಆಟೋ ಮತ್ತು ವಾಹನ ಮಾಲೀಕ ಸಂಘದ ಅಧ್ಯಕ್ಷ ಎ.ಪಿ. ಪೊನ್ನಪ್ಪ, ತಿರುನೆಲ್ಲಿ ಮಾಡ ಜೀವನ್ ಹಾಜರಿದ್ದರು. ಕಲಾವಿದರಾದ ಎಸ್.ಟಿ. ಗಿರೀಶ್, ವಿ.ಟಿ. ಶ್ರೀನಿವಾಸ್ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು.