ಸೋಮವಾರಪೇಟೆ, ಮೇ ೮: ಕರ್ನಾಟಕದಲ್ಲಿರುವ ನಾವೆಲ್ಲರೂ ನಾಡಭಾಷೆಯಾಗಿರುವ ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಪೊಲೀಸ್ ನಿರೀಕ್ಷಕ ಬಿ. ಜಿ. ಮಹೇಶ್ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ೧೦೭ನೇ ಸಂಸ್ಥಾಪನಾ ದಿನಾಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ೧೯೧೫ರಲ್ಲಿ ಸ್ಥಾಪಿಸಲ್ಪಟ್ಟ ಕನ್ನಡ ಸಾಹಿತ್ಯ ಪರಿಷತ್ ತನ್ನದೇ ಆದ ರೂಪುರೇಷೆಗಳನ್ನು ರಚಿಸಿ ಇತರ ಭಾಷೆಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದು ಕರ್ನಾಟಕದ ಮೊಟ್ಟ ಮೊದಲ ಕನ್ನಡಪರ ಸಂಘಟನೆಯೂ ಆಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಉಪನ್ಯಾಸಕಿ ಅನುಪಮ ಕುಮಾರಿ ಮಾತನಾಡಿ, ಸ್ವಾರ್ಥರಹಿತವಾಗಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುವ ಮನಸ್ಸುಗಳು ಒಂದುಗೂಡಬೇಕಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ಮೋಹನ್ ದಾಸ್ ಅವರು ಸಾಹಿತ್ಯ ಪರಿಷತ್ ನಡೆದುಬಂದ ದಾರಿಯನ್ನು ಸ್ಮರಿಸಿದರು. ಸಂಸ್ಥಾಪನ ದಿನಾಚರಣೆ ಅಂಗವಾಗಿ ನಡೆದ ನಾಡಗೀತೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಜ್ಯೋತಿ ಶುಭಕರ್, ಚಂದ್ರಿಕಾ ಗಣಪತಿ, ವಾಸಂತಿ ರವೀಂದ್ರ ಅವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ನಿರೀಕ್ಷಕ ಬಿ. ಜಿ.ಮಹೇಶ್, ನಿವೃತ್ತ ಉಪನ್ಯಾಸಕಿ ಅನುಪಮ ಕುಮಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮೋಹನ್ ದಾಸ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾಲೂಕು ಅಧ್ಯಕ್ಷ ಎಸ್. ಡಿ. ವಿಜೇತ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಜವರಪ್ಪ, ಕಾರ್ಯದರ್ಶಿ ಎ.ಪಿ. ವೀರರಾಜ್, ಕೋಶಾಧಿಕಾರಿ ಕೆ. ಪಿ. ದಿನೇಶ್, ಕಾರ್ಯದರ್ಶಿ ಜ್ಯೋತಿ ಅರುಣ್, ಪದಾಧಿಕಾರಿಗಳಾದ ಹೆಚ್. ಸಿ. ನಾಗೇಶ್, ಜೆ. ಸಿ. ಶೇಖರ್, ಪಿ. ಕೆ. ರವಿ, ಮಂಜು, ಕೆ. ಟಿ. ಪರಮೇಶ್, ನಯನ ತಾರಾ, ತಿಲೋತ್ತಮೆ, ಜಯಮ್ಮ, ನಾಗರಾಜ್, ಜೋಕಿಮ್ ವಾಸ್, ರುಬಿನ ಸೇರಿದಂತೆ ಇತರರು ಉಪಸ್ಥಿತರಿದ್ದರು.