ಮಡಿಕೇರಿ, ಮೇ ೭: ಗುತ್ತಿಗೆದಾರರಿಂದ ಒಂದು ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಮದೆ ಗ್ರಾ.ಪಂ. ಸದಸ್ಯೆ ನವೀನ ಹಾಗೂ ಪತಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಅಧ್ಯಕ್ಷೆ ಚಂದ್ರಾವತಿ ಅವರುಗಳ ಸದಸ್ಯ ಸ್ಥಾನವನ್ನು ಅನರ್ಹಗೊಳಿಸುವಂತೆ ಒತ್ತಾಯಿಸಿ ತಾಳತ್ತಮನೆ ನೇತಾಜಿ ಯುವಕ ಮಂಡಲವು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದೆ.
ಮಣ್ಣು ತೆರವು ವಿಚಾರದಲ್ಲಿ ಗ್ರಾ.ಪಂ. ಸದಸ್ಯೆ ನವೀನ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ ಮಾಧ್ಯಮಗಳಲ್ಲಿಯೂ ವರದಿಯಾಗಿದೆ. ಇದರಲ್ಲಿ ಗ್ರಾ.ಪಂ. ಅಧ್ಯಕ್ಷೆಯ ಪಾತ್ರ ಕೂಡ ಇದೆ ಎಂದು ಆರೋಪಿಸಿರುವ ಯುವಕ ಮಂಡಳ, ಗ್ರಾ.ಪಂ. ಅಧ್ಯಕ್ಷೆಯ ಪತಿ ಪಂಚಾಯಿತಿ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.