ಮಡಿಕೇರಿ, ಮೇ ೮: ಬೇಸಿಗೆಯ ರಜೆಯ ದಿನಗಳನ್ನು ವ್ಯರ್ಥ ಮಾಡದೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಅನುಪಯುಕ್ತ ವಸ್ತುಗಳಿಗೆ ಆಕರ್ಷಕ ರೂಪ ನೀಡುವ ಮೂಲಕ ಜೆ.ಎ.ಚರಿತ ಗಮನ ಸೆಳೆದಿದ್ದಾಳೆ.

ಮಡಿಕೇರಿಯ ಜೆ.ಬಿ.ಅನಿಲ್‌ಕುಮಾರ್ ಹಾಗೂ ಜೆ.ಎ.ಸವಿತ ದಂಪತಿಯ ಪುತ್ರಿ ಚರಿತ ನಗರದ ಸಂತಮೈಕಲರ ಶಾಲೆಯಲ್ಲಿ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬೇಸಿಗೆ ರಜೆಯಲ್ಲಿ ಬಿಸಿಲಿನಲ್ಲಿ ಕಾಲಕಳೆಯದೆ ಮನೆಯಲ್ಲಿರುವ ಅನುಪಯುಕ್ತ ವಸ್ತುಗಳಿಗೆ ಹೊಸ ರೂಪ ನೀಡುವ ಕಾಯಕದಲ್ಲಿ ಸಕ್ರಿಯಳಾಗಿದ್ದಾಳೆ.

ಕೋವಿಡ್ ಸಂದರ್ಭ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿತ್ತು. ಇದರಿಂದ ಪೋಷಕರ ಕೈಯಲ್ಲಿದ್ದ ಮೊಬೈಲ್ ಫೋನ್‌ಗಳು ಮಕ್ಕಳ ಕೈ ಸೇರಿತು. ಆದರೆ ಚರಿತ ಮೊಬೈಲ್ ಫೋನ್ ಮೂಲಕ ಯೂಟ್ಯೂಬ್‌ನಲ್ಲಿ ಬರುವ ಕಲಾಕುಸುರಿಗಳ ವೀಡಿಯೋವನ್ನು ಗಮನಿಸಿ ತಾನೂ ಅವುಗಳನ್ನು ತಯಾರಿಸುವ ಪ್ರಯತ್ನಕ್ಕೆ ಮುಂದಾದಳು.

ಕಾಗದಗಳನ್ನು ಬಳಸಿ ಆಕರ್ಷಕ ಪುಷ್ಪರಾಶಿ, ಪೆನ್ ಸ್ಟಾö್ಯಂಡ್, ಫೋನ್, ಚಿಟ್ಟೆಗಳನ್ನು ತಯಾರಿಸಿದಳು. ಅಲ್ಲದೆ ನೀರಿನ ಬಾಟಲಿಗಳನ್ನು ಬಳಸಿಕೊಂಡು ಫೋಟೋ ಫ್ರೇಮ್, ಹೂಕುಂಡ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮನೆಯ ಅಲಂಕಾರವನ್ನು ಹೆಚ್ಚಿಸಿದಳು. ಚಿತ್ರಕಲೆಯಲ್ಲೂ ವಿಶೇಷ ಆಸಕ್ತಿ ಹೊಂದಿರುವ ಚರಿತ ತಾವೇ ಸ್ವತಃ ವಿಭಿನ್ನ ಚಿತ್ರಗಳನ್ನು ಬಿಡಿಸಿ ಗೋಡೆಗಳಿಗೆ ಅಂದವನ್ನು ನೀಡಿದಳು. ಸದಾ ಕರಕುಶಲ ಕರ್ಮಿಯಂತೆ ಅತ್ಯಂತ ಸಹನೆಯಿಂದ ಕಾರ್ಯ ನಿರ್ವಹಿಸುವ ಚರಿತಾಳ ಪ್ರತಿಭೆಗೆ ಕಲಾ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಗಳ ಆಸಕ್ತಿಗೆ ತಂದೆ-ತಾಯಿ ಪ್ರೋತ್ಸಾಹ ನೀಡುತ್ತಿದ್ದು, ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಸಹಕರಿಸುತ್ತಿದ್ದಾರೆ. ತನ್ನ ಕಲಾ ಚಟುವಟಿಕೆಯನ್ನು ಮುಂದುವರೆಸುವುದರೊAದಿಗೆ ಮತ್ತಷ್ಟು ವರ್ಣರಂಜಿತ ಮೆರುಗು ನೀಡುವುದಾಗಿ ಚರಿತ ವಿಶ್ವಾಸ ವ್ಯಕ್ತಪಡಿಸಿದ್ದಾಳೆ.

- ಎಸ್.ಆರ್. ವತ್ಸಲ