ನಾಪೋಕ್ಲು, ಮೇ ೮: ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಭಕ್ತಜನ ಸಂಘದ ವತಿಯಿಂದ ನಡೆಸಲಾಗುವ ವಾರ್ಷಿಕ ಭಕ್ತ ಸಮಾರಾಧನೆ ಮತ್ತು ಮಹಾಸಭೆ ಸಂಘದ ಅಧ್ಯಕ್ಷ ಮುಕ್ಕಾಟಿರ ವಿನಯ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆಶ್ಲೇಷ ಬಲಿ, ಪೂಜೆ ನಡೆಸಲು ಸುಬ್ರಹ್ಮಣ್ಯ, ಮತ್ತಿತರ ಕ್ಷೇತ್ರಗಳಿಗೆ ಹೋದರೆ ಹೆಚ್ಚಿನ ವೆಚ್ಚವಾಗುತ್ತದೆ. ಆದ ಕಾರಣ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಸಾಮೂಹಿಕವಾಗಿ ಆಶ್ಲೇಷ ಪೂಜೆ ನಡೆಸಲು ಇಚ್ಛಿಸಲಾಗಿದೆ. ಇಲ್ಲಿ ಕಡಿಮೆ ಖರ್ಚಿನಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ಇದನ್ನು ಮತ್ತು ಭಕ್ತ ಸಮಾರಾಧನೆಯನ್ನು ಸರಿಯಾಗಿ ನಡೆಸಲು ಸಾಧ್ಯವಾಗಿಲ್ಲ. ಮುಂದಿನ ವರ್ಷಗಳಿಂದ ಇದನ್ನು ಉತ್ತಮ ರೀತಿಯಲ್ಲಿ ನಡೆಸುವದರ ಮೂಲಕ ಭಕ್ತರಿಗೆ ಅವಕಾಶ ಮಾಡಿಕೊಡಲಾಗುವದು ಎಂದರು.

ಭಕ್ತಜನ ಸಂಘದ ಯಶಸ್ವಿ ಕಾರ್ಯಕ್ರಮಕ್ಕೆ ದಾನಿಗಳ, ಗ್ರಾಮಸ್ಥರ, ಭಕ್ತಾದಿಗಳ ನಿರಂತರ ಸಹಕಾರವೇ ಕಾರಣ ಎಂದು ಹೇಳಿದರು.

ವಾರ್ಷಿಕ ವರದಿಯನ್ನು ಬಿ.ಎ.ಜುಮ್ಸ ತಿಮ್ಮಯ್ಯ ವಾಚಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕಮಾಂಡೆAಡ್ ಮಣವಟ್ಟಿರ ಕುಶಾಲಪ್ಪ, ನೆಲಜಿ ದೇವಳ ಆಡಳಿತ ಮಂಡಳಿ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ, ಖಜಾಂಚಿ ಮಣವಟ್ಟಿರ ಎಂ. ಚಂಗಪ್ಪ, ತಕ್ಕಮುಖ್ಯಸ್ಥರಾದ ಬಿ.ಬಿ. ನಾಣಯ್ಯ, ಎನ್.ಸಿ. ಪೊನ್ನಪ್ಪ, ಬಿ.ಪಿ. ಕುಂಞಪ್ಪ, ಕೆ.ಎ. ರಮೇಶ್ ಉತ್ತಯ್ಯ, ಭಕ್ತಜನ ಸಂಘದ ಪದಾಧಿಕಾರಿಗಳಾದ ಮಾಳೆಯಂಡ ಜಗದಾ ಈರಪ್ಪ, ಮಂಡೀರ ಬಿ. ದೇವಯ್ಯ, ಬಾಳೆಯಡ ಬೆಳ್ಯಪ್ಪ, ಎ.ಎಂ. ನವೀನ್, ಸಿ.ಬಿ. ಪೆಮ್ಮಯ್ಯ, ಮತ್ತಿತರರು ಇದ್ದರು. ಮುಕ್ಕಾಟಿರ ದಿಯಾ ಬಿದ್ದಪ್ಪ ಪ್ರಾರ್ಥನೆ, ಮುಕ್ಕಾಟಿರ ವಿನಯ್ ಸ್ವಾಗತಿಸಿ, ಎಂ.ಎA. ಚಂಗಪ್ಪ ವಂದಿಸಿದರು.

ಉತ್ಸವದಲ್ಲಿ ೨೩ ತುಲಾಭಾರ ಸೇವೆ, ದಾನಿಗಳಿಂದ ಕಾಫಿ, ಕಾಳುಮೆಣಸು, ಅಕ್ಕಿ, ಎಣ್ಣೆ ಸಮರ್ಪಣೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆಯ ನಂತರ ದೇವರ ಬಲಿ, ನೃತ್ಯ ಬಲಿ ನಡೆಯಿತು.